⚡ಟ್ರೆಂಡಿಂಗ್ಸ್

ಹಳ್ಳಿ ಸಂಸ್ಕೃತಿಯತ್ತ ಮುಖ ಮಾಡಿದ ಗದಗ ಮಂದಿ; ಭಜನಾ ಪದಗಳ ಮೂಲಕ ಭಾವೈಕ್ಯತೆಯ ಸಂದೇಶ...

ಶ್ರಾವಣ ಮಾಸದಲ್ಲಿ ಒಂದು ತಿಂಗಳ ನಿರಂತರ ಭಜನೆ

ಹಳ್ಳಿ ಸಂಸ್ಕೃತಿಗೆ ನಗರದ ಸ್ಪರ್ಶ; ಭಜನಾ ಪದಗಳ ಮೂಲಕ ಭಾವೈಕ್ಯತೆಯ ಸಂದೇಶ

ಗದಗ: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಸಾಂಪ್ರದಾಯಿಕ ಭಜನಾ ಪದಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ, ಗದಗ ನಗರದ ಕೇಶವ ಪಾರ್ಕ ಬಡಾವಣೆಯ ಜನತೆ ಹಳೆಯ ಸಂಸ್ಕೃತಿ–ಸಂಪ್ರದಾಯಕ್ಕೆ ಮರುಜೀವ ನೀಡುವ ಅಪೂರ್ವ ಕಾರ್ಯಕ್ಕೆ ಮುಂದಾಗಿದ್ದಾರೆ.

ಶ್ರಾವಣ ಮಾಸದ ಅಂಗವಾಗಿ ಕೇಶವ ಪಾರ್ಕ ಬಡಾವಣೆಯ ಅಷ್ಟಭುಜ ಈಶ್ವರ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಒಂದು ತಿಂಗಳ ಕಾಲ ನಿರಂತರ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಭಜನಾ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ವಿವಿಧ ವಯೋಮಾನದವರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ನಗರದ ನಿವಾಸಿಗಳು ಭಜನಾ ಪದಗಳನ್ನು ಹಾಡುತ್ತಿರುವ ರೀತಿ ಕಂಡು “ಹಳ್ಳಿ ಗಾಯಕರು ನಾಚುವಂತೆ ಹಾಡುತ್ತಿದ್ದಾರೆ” ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಹಿಂದೆ ಹಳ್ಳಿಗಳಲ್ಲಿ ಮನೆಮನೆಗೂ, ಬೀದಿ ಬೀದಿಗೂ ಮೊಳಗುತ್ತಿದ್ದ ಭಜನಾ ಪದಗಳು ಇದೀಗ ನಗರದ ಪ್ರಮುಖ ಬೀದಿಗಳಲ್ಲಿಯೂ ಪ್ರತಿಧ್ವನಿಸುತ್ತಿದ್ದು, ಹಿರಿಯರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ.

ವಿಶೇಷವೆಂದರೆ, ಈ ಭಜನಾ ಕಾರ್ಯಕ್ರಮಕ್ಕೆ ಮುಸ್ಲಿಂ ಸಮುದಾಯದವರೂ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ಗಮನ ಸೆಳೆದಿದೆ. ಭಕ್ತಿಯೊಂದಿಗೆ ಒಂದಾಗಿ ನಿಲ್ಲುವ ಮೂಲಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರಲಾಗುತ್ತಿದೆ.

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಭಜನಾ ಪದಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ. ಕಲಬುರ್ಗಿಯ ಶ್ರೀ ಶರಣಬಸವೇಶ್ವರರ ಭಾವಚಿತ್ರವನ್ನು ಮುಂದಿಟ್ಟುಕೊಂಡು ನಡೆಯುವ ಭಜನಾ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳು ಹಾಗೂ ಸಾಂಪ್ರದಾಯಿಕ ಭಜನಾ ಪದಗಳು ಮೊಳಗುತ್ತಿವೆ.

ಉದ್ಯಮಿಗಳು, ವ್ಯಾಪಾರಸ್ಥರು, ಮಾಧ್ಯಮ ಮಿತ್ರರು ಸೇರಿದಂತೆ ಬಡಾವಣೆಯ ವಿವಿಧ ವರ್ಗದ ಜನರು ಸಹ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ. ಪ್ರತಿದಿನ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಭಜನಾ ತಂಡದೊಂದಿಗೆ ಸಾಗುವ ಭಜನಾ ಕಾರ್ಯಕ್ರಮವು ಅಂತಿಮವಾಗಿ ಅಷ್ಟಭುಜ ಈಶ್ವರ ದೇವಸ್ಥಾನದಲ್ಲಿ ಮಂಗಲದೊಂದಿಗೆ ಸಂಪನ್ನಗೊಳ್ಳುತ್ತದೆ.

“ಸಂಸ್ಕೃತಿ ಉಳಿದರೆ ಸಂಸ್ಕಾರ ಉಳಿಯುತ್ತದೆ; ಭಜನಾ ಪದಗಳು ಉಳಿದರೆ ನಮ್ಮ ಪರಂಪರೆಯೂ ಉಳಿಯುತ್ತದೆ” ಎಂಬ ಸಂದೇಶವನ್ನು ಸಾರುತ್ತಿರುವ ಕೇಶವ ಪಾರ್ಕ ಬಡಾವಣೆಯ ಜನರ ಈ ವಿಶಿಷ್ಟ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...