⚡ಟ್ರೆಂಡಿಂಗ್ಸ್

ಘನ ತ್ಯಾಜ್ಯ ನಿರ್ವಹಣಾ ನಿಯಮ 2026ರ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

ಘನ ತ್ಯಾಜ್ಯ ನಿರ್ವಹಣಾ ನಿಯಮ 2026ರ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮ ವಹಿಸಿ
: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್
 
ಗದಗ (ಕರ್ನಾಟಕ ವಾರ್ತೆ) ಮೇ 20: ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಹೊಸ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026 ನಿಯಮಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಸಹಭಾಗಿತ್ವ ಹಾಗೂ ಕಾರ್ಯತತ್ಪರತೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ಅನುಷ್ಟಾನದ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
ಕೇಂದ್ರ ಸರ್ಕಾರದ ಘನ ತ್ಯಾಜ್ಯ ವಸ್ತುಗಳ ನಿಯಮಗಳು-2026 ರ ಅನ್ವಯ ಜಿಲ್ಲೆಯ ಎಲ್ಲ ಸಾರ್ವಜನಿಕರು, ಮನೆಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು. ಕಸವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕಾಗುತ್ತದೆ. ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಮಾಂಸದ ತ್ಯಾಜ್ಯ, ಹಣ್ಣು ಹೂವು, ಹಾಗೂ ಕೊಳೆಯುವ ವಸ್ತುಗಳನ್ನು ಹಸಿ ತ್ಯಾಜ್ಯದ ವಿಭಾಗದಲ್ಲೂ, ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್ ಮತ್ತು ಮರದ ವಸ್ತುಗಳನ್ನು ಒಣ ತ್ಯಾಜ್ಯದ ವಿಭಾಗದಲ್ಲೂ ನೀಡಬೇಕು. ಡೈಪರ್ಸ, ಸ್ಯಾನಿಟರಿ ನ್ಯಾಪಕಿನ್ ಗಳಂತಹ ವಸ್ತುಗಳನ್ನು ಸ್ಯಾನಿಟರಿ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕು. ಇನ್ನುಳಿದಂತೆ ಪೇಂಟ್ ಡಬ್ಬಗಳು, ಔಷಧ ಬಾಟಲಿಗಳು, ಇ ವೇಸ್ಟ್ , ಬಲ್ಬ್ , ಹಳೆಯ ಬ್ಯಾಟರಿ ಹಾಗೂ ಬಳಸಿದ ಸಿರಿಂಜ್ ಮತು ಬ್ಯಾಂಡೇಜ್‌ಗಳನ್ನು ವಿಶೇಷ ತ್ಯಾಜ್ಯದ ಅಡಿಯಲ್ಲಿ ನೀಡಲು ಸೂಚಿಸಲಾಗಿದೆ ಎಂದರು .
 
ಜಿಲ್ಲೆಯಲ್ಲಿ ಬಲ್ಕ ವೇಸ್ಟ್ ಜನರೇಟರ್ (ಬೃಹತ್ ಕಸ ಉತ್ಪಾದಕರನ್ನು) ಗುರುತಿಸಬೇಕು. ದಿನಕ್ಕೆ 100 ಕೆಜಿ ಗಿಂತ ಹೆಚ್ಚು ಕಸ ಉತ್ಪಾದಿಸುವ ಅಥವಾ ಪ್ರತಿ ನಿತ್ಯ 40000 ಲೀಟರ್ ಗಿಂತ ಹೆಚ್ಚು ನೀರು ಬಳಸುವ / 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಸಂಸ್ಥೆಗಳು ಈ ನಿಯಮದಡಿ ಬರುತ್ತವೆ. ಹಾಸ್ಟೆಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಅಪಾರ್ಟ್ಮೆಂಟ್‌ಗಳು ಇದರ ವ್ಯಾಪ್ತಿಗೆ ಬರುತ್ತಿದ್ದು ಅಂತಹವುಗಳನ್ನು ಗುರುತಿಸಿ ಕಡ್ಡಾಯವಾಗಿ ವೆಬ್‌ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಬೇಕು. ಹೊಸ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026 ಹಾಗೂ ವಿಲೇವಾರಿ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳು ಹೊಸ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026 ನಿಯಮಗಳನ್ನು ಜಾರಿಗೊಳಿಸಲು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು. ಈ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ ಅವರು ಮಾತನಾಡಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಸೆಪ್ಟೆಂಬರ್ 30, 2026 ಎಲ್ಲಾ ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳು ತಮ್ಮದೇ ಆದ 'ರಾಜ್ಯ ನೀತಿ'ಯನ್ನು (State policy ) ಅಂತಿಮಗೊಳಿಸಲು ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 30, 2026 ಎಲ್ಲಾ ನಗರ ಪ್ರದೇಶಗಳಲ್ಲಿ ಇರುವ ಹಳೆಯ ಕಸದ ರಾಶಿಗಳ ನಿರ್ವಹಣೆ ಭೌಗೋಳಿಕ ಮ್ಯಾಪಿಂಗ್ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಕ್ಟೋಬರ್ 31, 2027 ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಸಂಬAಧಿಸಿದ ಉಪ-ಕಾಯ್ದೆಗಳನ್ನು ( By Laws) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಚಳಗೇರಿ, ಕ.ರಾ.ಮಾ.ನ.ಮಂ.ಪರಿಸರ ಅಧಿಕಾರಿ ಲೋಹಿತ್‌ಕುಮಾರ್ ಪಿ.ಜೆ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಗದಗ ಬೆಟಗೇರಿ ನಗರಸಭೆಯ ಕಾರ್ಯಕಾರಿ ಅಭಿಯಂತರರು( ಪರಿಸರ) ಆನಂದ ಬದಿ, SWMದ ಎಕ್ಸಪರ್ಟ ಕೊಟ್ರೇಶ್, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆರೋಗ್ಯ ಇಲಾಖೆ , ಪರಿಸರ ಇಲಾಖೆ ಅಧಿಕಾರಿಗಳು, ಹಾಜರಿದ್ದರು.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...