⚡ಟ್ರೆಂಡಿಂಗ್ಸ್

ಗದಗ ತೋಂಟದಾರ್ಯ ಮಠ ಜಾತ್ರೆ ದುರಂತ ಖಂಡನೆ: ನಿರ್ಲಕ್ಷ್ಯಕ್ಕೆ ತಕ್ಕ ಶಿಕ್ಷೆ ಆಗಲೇಬೇಕು – ವಿಜಯ ಕಲ್ಮನಿ ಕಿಡಿ

ತೋಂಟದಾರ್ಯ ಮಠ ಜಾತ್ರೆ ದುರಂತ: ಜನರ ಜೀವದ ಜೊತೆ ಆಟವಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ; ವಿಜಯ ಕಲ್ಮನಿ ಗರ್ಜನೆ

ಗದಗವಾಣಿ ಸುದ್ದಿಮೂಲ 

ಗದಗ, ಮೇ 3: ನಗರದ ಪ್ರಸಿದ್ಧ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಸಂಭವಿಸಿದ ಭೀಕರ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಅವಘಡದ ಕುರಿತು ಆಟೋ ಚಾಲಕರ ಹಾಗೂ ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ ಅವರು ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಗೆ ಬಂದಿದ್ದ ನಿರಪರಾಧ ಜನರ ಜೀವದ ಜೊತೆ ಆಟವಾಡಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನಾಂದೋಲನ ರೂಪದಲ್ಲಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ತೀವ್ರ ಎಚ್ಚರಿಕೆ ನೀಡಿದರು.

ಜಾತ್ರೆಯಲ್ಲಿ ಮನರಂಜನೆ ಹೆಸರಿನಲ್ಲಿ ಅಳವಡಿಸಿದ್ದ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಆಟ ನಡೆಯುತ್ತಿದ್ದ ವೇಳೆ ಏಕಾಏಕಿ ಯಂತ್ರದ ಮುಖ್ಯ ವೀಲ್ ಕಟ್ಟಾಗಿ, ಸುಮಾರು 10ಕ್ಕೂ ಹೆಚ್ಚು ತೊಟ್ಟಿಲುಗಳು ಕಳಚಿ ನೆಲಕ್ಕುರುಳಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿದರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿರುವುದು ಘಟನೆ ಎಷ್ಟು ಭೀಕರವಾಗಿತ್ತೆಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಅವಘಡವು ಸಾಮಾನ್ಯ ಅಪಘಾತವಲ್ಲ, ಇದು ಆಡಳಿತದ ನಿರ್ಲಕ್ಷ್ಯ, ಸುರಕ್ಷತಾ ನಿಯಮ ಉಲ್ಲಂಘನೆ ಹಾಗೂ ಲಾಭದಾಸೆಯ ದುಷ್ಪರಿಣಾಮವಾಗಿದೆ ಎಂದು ವಿಜಯ ಕಲ್ಮನಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಯಾಂತ್ರಿಕ ಪರೀಕ್ಷೆ ಇಲ್ಲದೆ, ತಾಂತ್ರಿಕ ತಪಾಸಣೆ ನಡೆಸದೆ, ಸಾರ್ವಜನಿಕರ ಸುರಕ್ಷತೆಯನ್ನು ಪರಿಗಣಿಸದೆ ಅಪಾಯಕಾರಿ ಆಟೋಪಕರಣಗಳನ್ನು ನಡೆಸಲು ಅವಕಾಶ ನೀಡಿರುವುದು ಗಂಭೀರ ತಪ್ಪಾಗಿದೆ ಎಂದು ಹೇಳಿದರು.

ಜಾತ್ರೆಗೆ ಸಾವಿರಾರು ಜನರು ಭೇಟಿ ನೀಡುವ ವಿಚಾರ ಗೊತ್ತಿದ್ದರೂ, ಸ್ಥಳದಲ್ಲಿ ಸುರಕ್ಷತಾ ವ್ಯವಸ್ಥೆ, ತುರ್ತು ವೈದ್ಯಕೀಯ ಸೌಲಭ್ಯ, ಅಗ್ನಿಶಾಮಕ ವ್ಯವಸ್ಥೆ, ಪೊಲೀಸ್ ನಿಗಾವಹಿಕೆ, ಯಂತ್ರೋಪಕರಣಗಳ ಗುಣಮಟ್ಟ ಪರಿಶೀಲನೆ ಇತ್ಯಾದಿಗಳಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದೆ. ಜನರ ಜೀವಕ್ಕೆ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾದ ಬಳಿಕ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿರುವುದು ವಿಷಾದನೀಯ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯ ಕಲ್ಮನಿ ಮಾಡಿದ ಪ್ರಮುಖ ಆಗ್ರಹಗಳು ಹೀಗಿವೆ:

1. ಜಾತ್ರೆಯಲ್ಲಿ ಅಳವಡಿಸಿದ ಎಲ್ಲಾ ಡ್ಯಾನ್ಸಿಂಗ್ ಫ್ಲೈ, ಜೋಕಾಲಿ ಹಾಗೂ ಅಪಾಯಕಾರಿ ಯಂತ್ರೋಪಕರಣಗಳನ್ನು ತಕ್ಷಣ ಮುಟ್ಟುಗೋಲು ಹಾಕಬೇಕು.

2. ಗಾಯಗೊಂಡಿರುವ ಎಲ್ಲಾ ಮಹಿಳೆಯರು, ಮಕ್ಕಳು ಹಾಗೂ ಇತರರಿಗೆ ಉಚಿತ ಚಿಕಿತ್ಸೆ ನೀಡಿ, ಪ್ರತಿ ಕುಟುಂಬಕ್ಕೆ ತಕ್ಷಣ ಪರಿಹಾರ ಧನ ನೀಡಬೇಕು.

3. ಗಂಭೀರವಾಗಿ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಮತ್ತು ಆಯೋಜಕರು ಭರಿಸಬೇಕು.

4. ಅವಘಡಕ್ಕೆ ಕಾರಣರಾದ ಯಂತ್ರ ಮಾಲಕರು, ಗುತ್ತಿಗೆದಾರರು, ನಿರ್ಲಕ್ಷ್ಯ ವಹಿಸಿದ ಆಯೋಜಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.

5. ಜಾತ್ರೆ ಆವರಣದಲ್ಲಿ ಅಕ್ರಮವಾಗಿ ಹಾಕಲಾಗಿರುವ ಗೂಡಂಗಡಿ, ಅನಧಿಕೃತ ವ್ಯಾಪಾರ ಮಳಿಗೆಗಳು ಹಾಗೂ ನಿಯಮ ಉಲ್ಲಂಘನೆ ಅಂಗಡಿಗಳನ್ನು ತೆರವುಗೊಳಿಸಬೇಕು.

6. ಭವಿಷ್ಯದಲ್ಲಿ ಯಾವುದೇ ಜಾತ್ರೆ ಅಥವಾ ಉತ್ಸವದಲ್ಲಿ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಆಟೋಪಕರಣಗಳಿಗೆ ಅನುಮತಿ ನೀಡಬಾರದು.

7. ಜಿಲ್ಲಾಡಳಿತದ ವತಿಯಿಂದ ವಿಶೇಷ ತನಿಖಾ ಸಮಿತಿ ರಚಿಸಿ, 7 ದಿನಗಳಲ್ಲಿ ವರದಿ ನೀಡಬೇಕು.

ಈ ದುರಂತದಲ್ಲಿ ಗಾಯಗೊಂಡಿರುವ ಕುಟುಂಬಗಳ ನೋವು ಅರ್ಥಮಾಡಿಕೊಳ್ಳಬೇಕು. ಜಾತ್ರೆಗೆ ಸಂತೋಷಕ್ಕಾಗಿ ಬಂದಿದ್ದ ಮಕ್ಕಳು, ಮಹಿಳೆಯರು ರಕ್ತಸಿಕ್ತರಾಗಿ ಆಸ್ಪತ್ರೆಗೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾನವೀಯತೆಯ ಮೇಲೆ ಕಳಂಕವಾಗಿದೆ ಎಂದು ವಿಜಯ ಕಲ್ಮನಿ ಹೇಳಿದರು.

ಆಡಳಿತಕ್ಕೆ ಖಡಕ್ ಎಚ್ಚರಿಕೆ

ಇನ್ನೂ ಕೂಡ ಅಧಿಕಾರಿಗಳು ಪ್ರಕರಣವನ್ನು ಸಣ್ಣ ಘಟನೆ ಎಂದು ಪರಿಗಣಿಸಿ ಕಾಲಹರಣ ಮಾಡಿದರೆ, ಆಟೋ ಚಾಲಕರ ಹಾಗೂ ಮಾಲಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ರಸ್ತೆ ತಡೆ, ಮಠ ಜಾತ್ರೆ ವಿರೋಧಿಸಿ ಭಾರಿ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನರ ಜೀವದ ಜೊತೆ ಆಟವಾಡುವವರಿಗೆ ರಕ್ಷಣೆ ನೀಡುವ ಅಧಿಕಾರಿಗಳೂ ಹೊಣೆಗಾರರಾಗುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ವಿಜಯ ಕಲ್ಮನಿ ಗುಡುಗಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಹಲವಾರು ಸಾರ್ವಜನಿಕರು ಹಾಜರಿದ್ದರು.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...