ಮಾತಿನಲ್ಲಿ ಮಧುರತೆ, ಕೃತಿಯಲ್ಲಿ ಮಾನವೀಯತೆ ಪ್ರೋ ಜೈನರ್ ಅವರಿಗೆ ಒಲಿದ ಪ್ರತಿಷ್ಠಿತ "ಗದಗವಾಣಿ-ಜ್ಞಾನಶ್ರೀ" ರಾಜ್ಯ ಪ್ರಶಸ್ತಿ
“ಪಾಠಶಾಲೆಯಿಂದ ಸಮಾಜದವರೆಗೆ; ಮನುಜತೆಯ ಮೌಲ್ಯಗಳನ್ನು ಮೂಡಿಸಿದ ಮಹಾಗುರು "ಬಾಹುಬಲಿ"
* ಮಂಜುನಾಥ ಎಸ್.ರಾಠೋಡ ಗದಗ:
ಗದಗ ಜಿಲ್ಲೆಯ ಮಣ್ಣಿಗೆ ತನ್ನದೇ ಆದ ಒಂದು ವೈಶಿಷ್ಟ್ಯವಿದೆ. ಈ ಮಣ್ಣಿನಲ್ಲಿ ಹುಟ್ಟಿದ ಅನೇಕ ಮಹನೀಯರು ಸಮಾಜಕ್ಕೆ ದಾರಿ ತೋರಿದ್ದಾರೆ. ಅಂತಹ ಮಹಾನ್ ವ್ಯಕ್ತಿತ್ವಗಳಲ್ಲಿ ಪ್ರೋ. ಬಾಹುಬಲಿ ಪಿ. ಜೈನರ್ ಅವರ ಹೆಸರು ವಿಶೇಷವಾಗಿ ಉಲ್ಲೇಖಿಸಬೇಕಾದದ್ದು. ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳ ಸಮನ್ವಯ ರೂಪವಾಗಿ ಅವರು ಇಂದು ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ.
“ನಿಜವಾದ ಯಶಸ್ಸು ಪದಕಗಳಲ್ಲಿ ಅಲ್ಲ, ಅದು ಇತರರ ಬದುಕಿನಲ್ಲಿ ಬೆಳಕು ಹಚ್ಚುವುದರಲ್ಲಿ ಇದೆ” ಎಂಬ ಅವರ ಬದುಕಿನ ಧ್ಯೇಯವಾಕ್ಯವೇ ಅವರ ಕಾರ್ಯಗಳ ಮೂಲಸಿದ್ಧಾಂತ. ಶಿಕ್ಷಕರಾಗಿಯೂ, ಕಲಾವಿದರಾಗಿಯೂ, ಸಮಾಜಸೇವಕರಾಗಿಯೂ, ಮಾರ್ಗದರ್ಶಕರಾಗಿಯೂ ಅವರು ನಡೆಸಿದ ಜೀವನಯಾನವು ನಿಜಕ್ಕೂ ಸ್ಫೂರ್ತಿದಾಯಕ.
ಗದಗ ಜಿಲ್ಲೆಯ ಪುಟ್ಟ ಗ್ರಾಮ ಅಂತೂರು-ಬೆAತೂರಿನಿAದ ಹೊರಹೊಮ್ಮಿದ ಈ ಪ್ರತಿಭೆ ಇಂದು ನಾಡಿನಾದ್ಯಂತ ತನ್ನ ಸೇವೆಯ ಸುಗಂಧವನ್ನು ಹರಡುತ್ತಿದೆ. ಇವರ ಸೇವೆ ಪರಗಣಿಸಿ ಇದೇ ಮೇ ೩೦, ೨೦೨೬ರ ಶನಿವಾರದಂದು ಗದಗದ ಪುಣ್ಯಭೂಮಿ ಪಂಡಿತ ಪುಟ್ಟರಾಜ ಕವಿಗವಾಯಿಗಳ ಮಠದ ಸನ್ನಿಧಿಯಲ್ಲಿ ಇವರಿಗೆ 'ಗದಗವಾಣಿ-ಜ್ಞಾನಶ್ರೀ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
--
ಬಾಲ್ಯ ಮತ್ತು ಶಿಕ್ಷಣ:
ಗದಗ ಜಿಲ್ಲೆಯ ಅಂತೂರು-ಬೆAತೂರು ಎಂಬ ಸರಳ ಹಾಗೂ ಸಂಸ್ಕಾರಪೂರ್ಣ ಗ್ರಾಮದ ಮಣ್ಣಿನಲ್ಲಿ ಜನಿಸಿದ ಪ್ರೋ. ಬಾಹುಬಲಿ ಪಿ. ಜೈನರ್ ಅವರು ಬಾಲ್ಯದಿಂದಲೇ ಪ್ರತಿಭೆಯ ಕಿರಣಗಳನ್ನು ಚೆಲ್ಲಿದವರು. ತಂದೆ ಪಾರ್ಶ್ವನಾಥ ಹಾಗೂ ತಾಯಿ ಸುನಂದ ಅವರ ಮೌಲ್ಯಾಧಾರಿತ ಬದುಕಿನ ಪಾಠಗಳು ಇವರ ವ್ಯಕ್ತಿತ್ವದ ಬುನಾದಿಯಾಗಿವೆ. ಕುಟುಂಬದ ಸೌಹಾರ್ದ, ಶಿಸ್ತು ಮತ್ತು ಮಾನವೀಯ ಮೌಲ್ಯಗಳು ಇವರೊಳಗೆ ಚಿಕ್ಕ ವಯಸ್ಸಿನಿಂದಲೇ ಬೇರೂರಿದ್ದು, ಜೀವನದ ಪ್ರತಿಯೊಂದು ಹಂತದಲ್ಲೂ ದಾರಿದೀಪವಾಗಿವೆ.
ಬಾಲ್ಯದಲ್ಲೇ ಕಲೆಯ ಮೇಲೆ ಆಕರ್ಷಣೆ ಹೊಂದಿದ ಅವರು, ಹಾಡು, ನೃತ್ಯ ಮತ್ತು ವೇದಿಕೆ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದರು. ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ವಿವಿಧ ಟಿವಿ ವಾಹಿನಿಗಳಲ್ಲಿ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿ ಜನಮನ ಗೆದ್ದದ್ದು ಅವರ ಪ್ರತಿಭೆಯ ಮೊಳಕೆಯೇ ಆಗಿತ್ತು.
ಶಿಕ್ಷಣ ಕ್ಷೇತ್ರದಲ್ಲಿಯೂ ಅವರು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದುದು ಅವರ ಪರಿಶ್ರಮ, ಏಕಾಗ್ರತೆ ಮತ್ತು ಜ್ಞಾನಾಸಕ್ತಿಯ ಪ್ರತೀಕವಾಗಿದೆ. ಹಂಪಿ ವಿಶ್ವವಿದ್ಯಾಲಯದಲ್ಲಿಯೂ ಸ್ನಾತಕೋತ್ತರ ಪದವಿಯಲ್ಲಿ ಮೂರನೇ ರ‍್ಯಾಂಕ್ ಗಳಿಸಿ ತಮ್ಮ ಶೈಕ್ಷಣಿಕ ಪಯಣವನ್ನು ಮತ್ತಷ್ಟು ಮೆರೆದಿದ್ದಾರೆ.
ಇಂದು ಕಳೆದ ೧೭ ವರ್ಷಗಳಿಂದ ಗದಗದ ಎ.ಎಸ್.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಅವರು, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
__
ಪ್ರೊ. ಬಿ. ಪಿ. ಜೈನರ್ ಸಾಧನೆಗಳ ಪಥ:
ಪ್ರೋ. ಜೈನರ್ ಅವರ ಜೀವನವೇ ಸಾಧನೆಗಳ ಸರಮಾಲೆ. ಕಲೆ, ಶಿಕ್ಷಣ ಮತ್ತು ಸಮಾಜಸೇವೆಯ ಮೂರು ಕ್ಷೇತ್ರಗಳಲ್ಲಿ ಅವರು ಸಾಧಿಸಿದ ಪ್ರಗತಿ ವಿಶಿಷ್ಟವಾಗಿದೆ.
ಕಲೆಯ ಕ್ಷೇತ್ರದಲ್ಲಿ ಅವರು ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಗಾಯನ ಪ್ರತಿಭೆಯನ್ನು ತೋರಿದ್ದಾರೆ. ಚಂದನ ಟಿವಿಯ “ನಿತ್ಯೋತ್ಸವ”, ಈಟಿವಿಯ “ಹಾಡೊಂದು ನಾ ಹಾಡುವೆನು”, ಕಸ್ತೂರಿ ಟಿವಿಯ “ಹಾಡಿನ ಬಂಡಿ”, ಉದಯ ಟಿವಿಯ “ಅಕ್ಷರಮಾಲೆ” ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ.
ಅವರು ಕೇವಲ ಗಾಯಕನಲ್ಲ, ಒಬ್ಬ ಉತ್ತಮ ನಿರೂಪಕರೂ ಹೌದು. ಸಿಎಂ ಹಾಗೂ ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳನ್ನು ನಿರೂಪಿಸುವ ಮಟ್ಟಕ್ಕೆ ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಂಡಿರುವುದು ಅವರ ಪ್ರತಿಭೆಯ ಪರಾಕಾಷ್ಠೆ.
ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಮಹಾರಾಷ್ಟ್ರ, ಒಡಿಶಾ, ಚೆನ್ನೈ, ರಾಜಸ್ಥಾನ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುವ ಅವರು, ತಮ್ಮ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಹರಡಿದ್ದಾರೆ.
ಮೈಸೂರು ದಸರಾ, ಹಂಪಿ ಉತ್ಸವ, ಸಾಹಿತ್ಯ ಸಮ್ಮೇಳನ, ಲಕ್ಕುಂಡಿ ಉತ್ಸವ ಮುಂತಾದ ಪ್ರಮುಖ ಉತ್ಸವಗಳಲ್ಲಿ ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದ್ದಾರೆ.
ಸಮಾಜ ಸೇವೆಯಲ್ಲಿ ಅವರ ಪಾತ್ರ ಅತಿ ಮಹತ್ತರವಾಗಿದೆ. ಎನ್‌ಎಸ್‌ಎಸ್ ವಿಭಾಗದ ಕಾರ್ಯಕ್ರಮಾಧಿಕಾರಿಯಾಗಿ ಅವರು ಕಪ್ಪತ್ತುಗುಡ್ಡದಲ್ಲಿ ಚೆಕ್ ಡ್ಯಾಮ್ ನಿರ್ಮಾಣ, “ಸೇವ್ ಬರ್ಡ್ ಸೇವ್ ವಾಟರ್” ಅಭಿಯಾನ, ನಿರ್ಗತಿಕರಿಗೆ ಆಹಾರ ಮತ್ತು ಹಾಸಿಗೆ ವಿತರಣೆ ಮುಂತಾದ ಅನೇಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
--
ಸಂಬAಧಗಳ ಬೆಸುಗೆ: ಮಗನಾಗಿ ಸ್ವೀಕರಿಸಿದ ಔದಾರ್ಯ;
ಗದಗ ಜಿಲ್ಲೆಯ ಮಣ್ಣಿನ ಮಗ, ಅಕ್ಷರ ಮತ್ತು ಕಲೆಯ ಸಮನ್ವಯಕಾರ ಪ್ರೊ. ಬಿ. ಪಿ. ಜೈನರ್ ಅವರ ಜೀವನವು ಕಠಿಣ ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಒಬ್ಬ ಸಾಮಾನ್ಯ ಹಳ್ಳಿಯ ಹುಡುಗನಾಗಿ ಆರಂಭವಾದ ಇವರ ಪಯಣ ಇಂದು ನಾಡಿನಾದ್ಯಂತ ಪಸರಿಸಿದೆ. ಪ್ರೊ. ಜೈನರ್ ಅವರ ವ್ಯಕ್ತಿತ್ವದ ಅತ್ಯಂತ ಉದಾತ್ತ ಭಾಗವೆಂದರೆ ಅವರ ಕೌಟುಂಬಿಕ ಪ್ರೇಮ. ತಮ್ಮ ಸ್ವಂತ ಮಕ್ಕಳಾದ ಪ್ರಣಾಲಿ ಮತ್ತು ಯದುವೀರ ಅವರಷ್ಟೇ ಪ್ರೀತಿಯಿಂದ, ಶಿರಹಟ್ಟಿ ತಾಲೂಕಿನ ಮಜೂರು ತಾಂಡಾದ ಪ್ರಕಾಶ್ ಲಮಾಣಿ ಎಂಬ ವಿದ್ಯಾರ್ಥಿಯನ್ನು ಕಳೆದ ೧೨ ವರ್ಷಗಳಿಂದ ದತ್ತು ಪಡೆದು, ಇಂದು ಅವನಿಗೆ ಮದುವೆ ಮಾಡುವ ಮೂಲಕ ತಂದೆಯ ಸ್ಥಾನದಲ್ಲಿ ನಿಂತಿದ್ದಾರೆ. ಲಂಬಾಣಿ ನೃತ್ಯ ಕಲೆಯ ಸಂರಕ್ಷಣೆಗಾಗಿ ಇವರು ಕಟ್ಟಿದ ತಂಡ ಇಂದು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ.ಬ
ಅವರ ವೈಯಕ್ತಿಕ ಜೀವನದಲ್ಲಿಯೂ ಮಾನವೀಯತೆ ಮೆರೆಯುತ್ತದೆ. ಪ್ರಕಾಶ ಲಮಾಣಿಯನ್ನು ಮಗನಾಗಿ ಸ್ವೀಕರಿಸಿ ಸಾಕುತ್ತಿರುವುದು ಅವರ ಹೃದಯದ ಮಹತ್ವವನ್ನು ತೋರಿಸುತ್ತದೆ. ಮಡದಿ ಸುಪ್ರೀತಾ, ಮಕ್ಕಳು ಪ್ರಣಾಲಿ ಮತ್ತು ಯದುವೀರ ಅವರನ್ನೊಳಗೊಂಡ ಸುಂದರ ಸಂಸಾರದ ಜೊತೆಗೆ, ಸಮಾಜವನ್ನೇ ಒಂದು ಕುಟುಂಬವೆAದು ಭಾವಿಸಿರುವ ಪ್ರೊ. ಬಿ. ಪಿ. ಜೈನರ್ ಅವರು ಆಧುನಿಕ ಕಾಲದ ಶ್ರೇಷ್ಠ ಶಿಕ್ಷಕ ಮತ್ತು ಮಾನವತಾವಾದಿಯಾಗಿ ಮಿನುಗುತ್ತಿದ್ದಾರೆ.
___
“ನಾನಲ್ಲ… ನೀವು” ಎಂಬ ಸೇವಾ ಮಂತ್ರದಿAದ ಬೆಳಗಿದ ಎನ್‌ಎಸ್‌ಎಸ್ ದೀಪ: ಪ್ರೊ. ಬಿ. ಪಿ. ಜೈನರ್
ಗದಗದ ಶ್ರೀ ವಿ.ಆರ್. ಕುಸ್ತಗಿ ಸ್ಮಾರಕ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಓSS) ಘಟಕವು ಪ್ರೊ. ಬಿ. ಪಿ. ಜೈನರ್ ಅವರ ನಾಯಕತ್ವದಲ್ಲಿ ಸಮಾಜ ಪರಿವರ್ತನೆಯ ಒಂದು ಶಕ್ತಿಯುತ ಚಳವಳಿಯಾಗಿ ರೂಪಗೊಂಡಿದೆ. "ನಾನಲ್ಲ… ನೀವು" ಎಂಬ ಸೇವಾ ತತ್ವವನ್ನು ಕೇವಲ ಘೋಷವಾಕ್ಯವಾಗಿಸದೇ, ತಮ್ಮ ಬದುಕಿನ ಭಾಗವಾಗಿಸಿಕೊಂಡಿರುವ ಪ್ರೊ. ಜೈನರ್, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹತ್ಕಾರ್ಯ ಮಾಡುತ್ತಿದ್ದಾರೆ.
ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ಇವರ ನೇತೃತ್ವದ ತಂಡವು ೨,೫೦೦ ನಿರ್ಗತಿಕರಿಗೆ ಆಹಾರ ಕಿಟ್, ೪,೦೦೦ ಮಾಸ್ಕ್ ಹಾಗೂ ೧,೫೦೦ ಬಟ್ಟೆಗಳನ್ನು ವಿತರಿಸಿ ಸಾವಿರಾರು ಜೀವಗಳಿಗೆ ಆಸರೆಯಾಯಿತು. ಪರಿಸರ ಸಂರಕ್ಷಣೆಯಲ್ಲೂ ಇವರ ಕಾಳಜಿ ಅಪಾರವಾಗಿದ್ದು, ಕಪ್ಪತಗುಡ್ಡದ ಅರಣ್ಯದಲ್ಲಿ ಚೆಕ್ ಡ್ಯಾಮ್‌ಗಳ ನಿರ್ಮಾಣ ಹಾಗೂ "ಪಕ್ಷಿಗಳನ್ನು ಉಳಿಸಿ, ನೀರನ್ನು ಉಳಿಸಿ" ಅಭಿಯಾನದ ಮೂಲಕ ೩,೦೦೦ ಮನೆಗಳಿಗೆ ಮಣ್ಣಿನ ಪಾತ್ರೆಗಳನ್ನು ವಿತರಿಸಿ ಮೂಕಜೀವಿಗಳ ದಾಹ ತಣಿಸಿದ್ದಾರೆ. ೩,೫೦೦ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಪೋಷಿಸುತ್ತಿರುವ ಇವರು, ೩೦ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜೀವದಾನದ ಮಹತ್ವವನ್ನು ಸಾರಿದ್ದಾರೆ.
ಸಮಾಜದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ವ್ಯಸನಮುಕ್ತ ಜೀವನದ ಕುರಿತು ೮೦ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಜೈನರ್ ಅವರು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ ಸ್ವಚ್ಛ ಭಾರತ, ಬೇಟಿ ಬಚಾವೊ ಬೇಟಿ ಪಡಾವೊ ಮತ್ತು ಡಿಜಿಟಲ್ ಇಂಡಿಯಾವನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಿದ್ದಾರೆ. ಚಳಿಗಾಲದಲ್ಲಿ ನಿರಾಶ್ರಿತರಿಗೆ ೩,೦೦೦ ಕಂಬಳಿಗಳನ್ನು ವಿತರಿಸುವ ಮೂಲಕ ಮಾನವೀಯತೆಯ ದೀವಿಗೆಯನ್ನು ಬೆಳಗಿದ್ದಾರೆ. ಕೇವಲ ಬೋಧನೆಗೆ ಸೀಮಿತವಾಗದ ಇವರು, ತಮ್ಮ ನಿಸ್ವಾರ್ಥ ಸೇವೆ, ಸರಳತೆ ಮತ್ತು ಸಾಂಸ್ಕೃತಿಕ ಮನೋಭಾವದ ಮೂಲಕ ವಿದ್ಯಾರ್ಥಿಗಳಿಗೆ ಬದುಕಿನ ಮಾದರಿಯಾಗಿದ್ದಾರೆ. ಒಟ್ಟಿನಲ್ಲಿ, ಪ್ರೊ. ಬಿ. ಪಿ. ಜೈನರ್ ಅವರ ಮಾರ್ಗದರ್ಶನದ ಎನ್‌ಎಸ್‌ಎಸ್ ಘಟಕವು "ಸೇವೆ ಮೊದಲು – ಸ್ವಾರ್ಥ ನಂತರ" ಎಂಬ ತತ್ವಕ್ಕೆ ಸಾಕ್ಷಿಯಾಗಿ ಮುಂದುವರಿಯುತ್ತಿದೆ.
---
ಪರಿಸರ ಸಂರಕ್ಷಣೆ; ಜೀವಜಗತ್ತಿನ ಕಾಳಜಿ:
ಪ್ರೊ. ಬಿ. ಪಿ. ಜೈನರ್ ಅವರ ಪರಿಸರ ಪ್ರೇಮವು ಕೇವಲ ಭಾಷಣಕ್ಕೆ ಸೀಮಿತವಾಗದೆ ಕ್ರಿಯೆಯಲ್ಲಿ ಸಾಕಾರಗೊಂಡಿದೆ. ಇವರ ನೇತೃತ್ವದಲ್ಲಿ "ಪಕ್ಷಿಗಳನ್ನು ಉಳಿಸಿ, ನೀರನ್ನು ಉಳಿಸಿ" ಎಂಬ ವಿಶಿಷ್ಟ ಅಭಿಯಾನವು ಕಳೆದ ಮೂರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ತೀವ್ರ ಬೇಸಿಗೆಯ ಬಿಸಿಲಿನಲ್ಲಿ ನೀರು ಮತ್ತು ಆಹಾರವಿಲ್ಲದೆ ಪರಿತಪಿಸುವ ಮೂಕ ಪ್ರಾಣಿ-ಪಕ್ಷಿಗಳ ದಾರುಣ ಸ್ಥಿತಿಯನ್ನು ಗಮನಿಸಿದ ಇವರ ತಂಡ, ಪ್ರತಿ ಮನೆಮನೆಗೆ ತೆರಳಿ ಎರಡು ಮಣ್ಣಿನ ಬೌಲ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದೆ. ಈವರೆಗೆ ಸುಮಾರು ೨,೦೦೦ಕ್ಕೂ ಹೆಚ್ಚು ಮನೆಗಳಿಗೆ ಈ ಮಣ್ಣಿನ ಪಾತ್ರೆಗಳನ್ನು ತಲುಪಿಸಲಾಗಿದ್ದು, ಅವುಗಳಲ್ಲಿ ಒಂದರಲ್ಲಿ ನೀರು ಮತ್ತು ಇನ್ನೊಂದರಲ್ಲಿ ಆಹಾರವನ್ನು ನೆರಳಿನ ಪ್ರದೇಶದಲ್ಲಿ ಇಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. "ನಾವು ಹೇಗೆ ಬದುಕುತ್ತೇವೋ, ಅವುಗಳನ್ನೂ ಹಾಗೆಯೇ ಬದುಕಿಸೋಣ" ಎಂಬ ಉದಾತ್ತ ಉದ್ದೇಶದ ಈ ಕಾರ್ಯವು, ಜೀವಜಗತ್ತಿನ ಬಗ್ಗೆ ಅವರಿಗಿರುವ ಅಪಾರ ಕಾಳಜಿ ಮತ್ತು ಪರಿಸರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
---
ಲಂಬಾಣಿ ಸಂಸ್ಕೃತಿಯ ಉಳಿವು ಮತ್ತು ಮಹಿಳಾ ಸಬಲೀಕರಣದ ಹರಿಕಾರ:
ಸಮಾಜದ ಕಟ್ಟಕಡೆಯ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರೊ. ಬಿ. ಪಿ. ಜೈನರ್ ಅವರ ಕಾರ್ಯವೈಖರಿ ಅನನ್ಯವಾದುದು. ಅಳಿವಿನ ಅಂಚಿನಲ್ಲಿದ್ದ ವಿಶಿಷ್ಟ ಲಂಬಾಣಿ ನೃತ್ಯ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅವರು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ. ಸ್ವತಃ ಲಂಬಾಣಿ ನೃತ್ಯ ತಂಡವನ್ನು ಕಟ್ಟಿ, ಯುವಕ-ಯುವತಿಯರಿಗೆ ವ್ಯವಸ್ಥಿತ ತರಬೇತಿ ನೀಡುವ ಮೂಲಕ ಈ ಜಾನಪದ ಕಲೆಯನ್ನು ಮರುಜೀವಗೊಳಿಸಿದ್ದಾರೆ. ಇವರ ಪರಿಶ್ರಮದ ಫಲವಾಗಿ ಈ ತಂಡವು ಕರ್ನಾಟಕ ಸರ್ಕಾರ ಆಯೋಜಿಸುವ ಯುವಜನೋತ್ಸವದಲ್ಲಿ ಸತತ ಎರಡು ಬಾರಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ಇದು ಅವರ ಕಲಾ ಸಂಸ್ಕೃತಿ ಪ್ರೀತಿ ಮತ್ತು ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ.
ಕೇವಲ ಕಲೆಗೆ ಸೀಮಿತವಾಗದ ಇವರು, ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂಬುದನ್ನು ಮನಗಂಡಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಮನೆಯಲ್ಲಿಯೇ ಸ್ವಂತ ಉದ್ಯೋಗ ಆರಂಭಿಸಿ, ಆರ್ಥಿಕವಾಗಿ ಬಲಿಷ್ಠರಾಗಲು ಅನೇಕ ವಿನೂತನ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುವ ಮೂಲಕ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪ್ರೊ. ಜೈನರ್ ಅವರ ಈ ಕಾರ್ಯಗಳು ಸಮಾಜದ ಸಮಗ್ರ ಪ್ರಗತಿಗೆ ಭದ್ರ ಬುನಾದಿಯಾಗಿವೆ.
ಪ್ರಶಸ್ತಿ ಮತ್ತು ಗೌರವಗಳು:
ಪ್ರೋ. ಜೈನರ್ ಅವರ ಸಾಧನೆಗಳನ್ನು ಗುರುತಿಸಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಯುವ ಪ್ರಶಸ್ತಿ ಅವರಿಗೆ ದೊರೆತಿದ್ದು, ಅವರ ಯುವಜನ ಸೇವೆಗೆ ಸಲ್ಲಿಸಿದ ಗೌರವವಾಗಿದೆ.
ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ, ಬೆಂಗಳೂರು ವತಿಯಿಂದ ನೀಡಲ್ಪಟ್ಟ “ಕರುನಾಡ ಜ್ಯೋತಿ” ಪ್ರಶಸ್ತಿ ಅವರ ಸಮಾಜಮುಖಿ ಕಾರ್ಯಗಳಿಗೆ ದೊರೆತ ಮಾನ್ಯತೆ.
ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರದಾನವಾದ ಡಾ. ಡಿ.ಸಿ. ಪಾವಟೆ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ, ಅವರ ಎನ್‌ಎಸ್‌ಎಸ್ ಕಾರ್ಯಕ್ಷಮತೆಗೆ ದೊರೆತ ಗೌರವದ ಸಂಕೇತವಾಗಿದೆ.
ಈ ಎಲ್ಲಾ ಪ್ರಶಸ್ತಿಗಳು ಅವರ ಸಾಧನೆಯ ಪ್ರತಿಫಲ ಮಾತ್ರವಲ್ಲ, ಸಮಾಜದ ಮೇಲಿನ ಅವರ ಬದ್ಧತೆ ಮತ್ತು ಸೇವಾಭಾವನೆಗೆ ಸಿಕ್ಕ ಮಾನ್ಯತೆಗಳಾಗಿವೆ.
ಒಟ್ಟಿನಲ್ಲಿ, ಪ್ರೋ. ಬಾಹುಬಲಿ ಪಿ. ಜೈನರ್ ಅವರ ಜೀವನವು ಸಾಧನೆ, ಸೇವೆ ಮತ್ತು ಸಂಸ್ಕೃತಿಯ ಸುಂದರ ಸಮನ್ವಯ. ಅವರು ತೋರಿದ ದಾರಿ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯ ಶಿಖರವಾಗಿದೆ.
*****
Post a Comment