⚡ಟ್ರೆಂಡಿಂಗ್ಸ್

ಜಿಲ್ಲೆಯಾದ್ಯಂತ ಅಕ್ರಮ ದಂಧೆ ಆರೋಪ ; ಖಚಿತ ಮಾಹಿತಿ ಮೇರೆಗೆ ದಾಳಿ, ಅಂದಾಜು 300 ಕ್ವಿಂಟಲ್ ಅಕ್ಕಿ ವಶ

ಗದಗದಲ್ಲಿ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ಜಾಲ ಬಯಲು?

ಜಿಲ್ಲೆಯಾದ್ಯಂತ ಅಕ್ರಮ ದಂಧೆ ಆರೋಪ ; ಖಚಿತ ಮಾಹಿತಿ ಮೇರೆಗೆ ದಾಳಿ, ಅಂದಾಜು 300 ಕ್ವಿಂಟಲ್ ಅಕ್ಕಿ ವಶ

ಗದಗವಾಣಿ ಸುದ್ದಿಮೂಲ
ಗದಗ, ಮೇ 6:

 ಸರ್ಕಾರವು ಬಡಜನರಿಗೆ ನ್ಯಾಯಬೆಲೆಯಲ್ಲಿ ವಿತರಿಸುವ ಪಡಿತರ ಅಕ್ಕಿಯನ್ನು ಕಳ್ಳಸಾಗಾಣಿಕೆ ಮೂಲಕ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿದೆ ಎಂಬ  ಆರೋಪಗಳು ಗದಗ ಜಿಲ್ಲೆಯಾದ್ಯಂತ ಕೇಳಿಬರುತ್ತಿರುವ ನಡುವೆಯೇ, ಗದಗ ನಗರದಲ್ಲಿ ನಡೆದ ದಾಳಿಯಲ್ಲಿ ಅಂದಾಜು 300 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ.

 ಈ ಘಟನೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊಡ್ಡ ಮಟ್ಟದ ಅಕ್ರಮ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆ ಮತ್ತಷ್ಟು ಬಲಗೊಂಡಿದೆ.

ಮೂಲಗಳ ಪ್ರಕಾರ, ಕೊಪ್ಪಳ ಭಾಗದಿಂದ ಇಲಕಲ್ ಮಾರ್ಗವಾಗಿ ಮಹಾರಾಷ್ಟ್ರ ಕಡೆಗೆ ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಹಾರ ಇಲಾಖೆಯ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಗದಗ ಪಡಿತರ ಪ್ರದೇಶದ ಆಹಾರ ನಿರೀಕ್ಷಕರಾದ ಜಗದೀಶ ಭರಮಪ್ಪ ಅಮಾತಿ ಅವರು ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ಸೂಚನೆಯಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ದೂರು ಆಧರಿಸಿ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಎಂಪಿ09/ಡಿಎನ್-7251 ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲಿಸಿದರು. ಪರಿಶೀಲನೆ ವೇಳೆ ಲಾರಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದುದು ಪತ್ತೆಯಾದ ಹಿನ್ನೆಲೆ ಲಾರಿಯೊಂದಿಗೆ ಅಂದಾಜು 300 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡರು.

ವಶಪಡಿಸಿಕೊಂಡ ಅಕ್ಕಿಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗದಗ ಪಡಿತರ ಪ್ರದೇಶದ ಗೋದಾಮಿಗೆ ಸಾಗಿಸಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಬಡಜನರಿಂದ ಕಡಿಮೆ ದರದಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ, ಖಾಸಗಿ ಗೋದಾಮುಗಳಲ್ಲಿ ಸಂಗ್ರಹಿಸಿ ನಂತರ ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಸಾಗಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಗಡಿ ಭಾಗಗಳಿಗೆ ಈ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಶಂಕೆಯೂ ಕೇಳಿಬಂದಿದೆ.

ಇದೇ ವೇಳೆ, ಕೆಲ ಅಧಿಕಾರಿಗಳು ಹಾಗೂ ಕೆಲವರು ತಮ್ಮನ್ನು ಪತ್ರಕರ್ತರೆಂದು ಹೇಳಿಕೊಳ್ಳುವವರು ಲಂಚ ಪಡೆದು ಮೌನವಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಜನರಲ್ಲಿ ಅನುಮಾನ ಮೂಡಿಸಿದೆ.

ಗದಗ, ರೋಣ, ನರಗುಂದ, ಲಕ್ಷ್ಮೇಶ್ವರ, ಮುಂಡರಗಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಈ ದಂಧೆ ಜೋರಾಗಿದ್ದು, ಪ್ರತಿ ತಿಂಗಳು ಸಾವಿರಾರು ಕ್ವಿಂಟಲ್ ಪಡಿತರ ಅಕ್ಕಿ ಕಾಳಸಂತೆಗೆ ಹರಿದುಹೋಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲವು ಖಾಸಗಿ ಗೋದಾಮುಗಳು ಹಾಗೂ ಮನೆಗಳನ್ನು ತಾತ್ಕಾಲಿಕ ಸಂಗ್ರಹ ಕೇಂದ್ರಗಳಾಗಿ ಬಳಸಲಾಗುತ್ತಿದೆ ಎನ್ನಲಾಗಿದೆ.

ಈ ಪ್ರಕರಣವು ಕೇವಲ ಒಂದು ಭಾಗ ಮಾತ್ರವಾಗಿದ್ದು, ಸಮಗ್ರ ತನಿಖೆ ನಡೆಸಿದರೆ ಇನ್ನಷ್ಟು ಅಕ್ರಮ ಜಾಲ ಬಯಲಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಲಾರಿ ಚಾಲಕ, ಮಾಲೀಕ ಹಾಗೂ ಈ ದಂಧೆಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ನಿಯಂತ್ರಣ ಆದೇಶ ಸೇರಿದಂತೆ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಸಾರ್ವಜನಿಕರು ಜಿಲ್ಲಾಡಳಿತ, ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಜಂಟಿಯಾಗಿ ದಾಳಿ ನಡೆಸಿ, ಬಡಜನರ ಹೊಟ್ಟೆಗೆ ಸೇರಿದ ಧಾನ್ಯವನ್ನು ಕಳ್ಳಬಜಾರಿಗೆ ತಿರುಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಈ ದಂಧೆಗೆ ಅಂತ್ಯ ಬರಲಿದೆಯೇ ಎಂಬುದನ್ನು ಜನತೆ ಕಾದುನೋಡುತ್ತಿದ್ದಾರೆ.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...