⚡ಟ್ರೆಂಡಿಂಗ್ಸ್

ನರಗುಂದದಲ್ಲಿ ಪ್ರೀತಿಸಿ ಮದುವೆಯಾದ ಪತಿಯನ್ನೇ ಕೊಂದ ಪತ್ನಿ..!

ಪತಿಯನ್ನೇ ಕೊಂದ ಪತ್ನಿ..!

ಕೌಟುಂಬಿಕ ಕಲಹಕ್ಕೆ ರಕ್ತರಂಜಿತ ಅಂತ್ಯ; ಕಬ್ಬಿಣದ ಸಲಾಕೆ ಹೊಡೆತಕ್ಕೆ ಯುವಕ ಸಾವು

ಗದಗ, ಮೇ 20:
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ದಾಂಪತ್ಯ ಕಲಹ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಪತ್ನಿಯೇ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.

ಗ್ರಾಮದ ನಿವಾಸಿ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (29) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಪತ್ನಿ ಕವಿತಾ ಹಾದಿಮನಿಯನ್ನು ನರಗುಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೀತಿಯ ಮದುವೆ… ಆದರೆ ಜಗಳಗಳ ನೆರಳು

ಮಾಹಿತಿಯ ಪ್ರಕಾರ, ವಿಶ್ವನಾಥ ಮತ್ತು ಕವಿತಾ ಅವರು 2022ರ ಫೆಬ್ರವರಿಯಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮದುವೆಯಾದ ದಿನದಿಂದಲೇ ದಾಂಪತ್ಯ ಜೀವನದಲ್ಲಿ ಅಸಮಾಧಾನ, ಜಗಳಗಳು ಸಾಮಾನ್ಯವಾಗಿದ್ದವು ಎನ್ನಲಾಗಿದೆ.

ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ವಿಶ್ವನಾಥ ಗ್ರಾಮದಲ್ಲೇ ಕೃಷಿ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ತಂದೆ ಮಾಜಿ ಸೈನಿಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಎರಡು ವರ್ಷ ದೂರ… 15 ದಿನಗಳ ಹಿಂದಷ್ಟೇ ವಾಪಸ್

ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಕವಿತಾ ತವರು ಮನೆಗೆ ತೆರಳಿದ್ದಳು. ಬಳಿಕ ಗಂಡನ ಮನೆಗೆ ಮರಳಿರಲಿಲ್ಲ. ಆದರೆ ಸುಮಾರು 15 ದಿನಗಳ ಹಿಂದಷ್ಟೇ ಮತ್ತೆ ಪತಿಯ ಮನೆಗೆ ಬಂದಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಧ್ಯರಾತ್ರಿ ಜಗಳ… ಕಬ್ಬಿಣದ ಸಲಾಕೆ ಪ್ರಹಾರ

ನಿನ್ನೆ ರಾತ್ರಿ ವೇಳೆ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಕವಿತಾ ಕಬ್ಬಿಣದ ಸಲಾಕೆಯಿಂದ ವಿಶ್ವನಾಥ ಅವರ ತಲೆಗೆ ಹೊಡೆದಿದ್ದಾಳೆ ಎನ್ನಲಾಗಿದೆ. ತೀವ್ರ ಗಾಯಗೊಂಡ ವಿಶ್ವನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.

ಘಟನೆ ನಡೆದ ವೇಳೆ ಮನೆಯ ಮಹಡಿಯಲ್ಲಿ ಅತ್ತೆ ಮಲಗಿದ್ದರೆ, ಮಾವ ಮನೆಯ ಹೊರಭಾಗದಲ್ಲಿ ಮಲಗಿದ್ದರು ಎಂದು ತಿಳಿದುಬಂದಿದೆ.

ಮೂರರ ಹರೆಯದ ಮಗುವಿಗೆ ತಂದೆಯಿಲ್ಲ

ಈ ದಂಪತಿಗೆ ಮೂರು ವರ್ಷದ ಗಂಡು ಮಗು ಇದ್ದು, ತಂದೆಯನ್ನು ಕಳೆದುಕೊಂಡು ಮಗು ಅನಾಥವಾಗಿರುವುದು ಮನಕಲಕುವಂತಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ

ಸುದ್ದಿ ತಿಳಿಯುತ್ತಿದ್ದಂತೆ ನರಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...