69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಭಾಧ್ಯಕ್ಷ ಜಿ ಎಸ್ ಪಾಟೀಲ ಚರ್ಚೆ
ಗದಗ, ಸೆ.1: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಸೆಪ್ಟೆಂಬರ್ 13ರಿಂದ 19ರವರೆಗೆ ನಡೆಯಲಿರುವ 69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ (CPC) ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಶ್ರೀ ಗುರುಪಾದಗೌಡ ಸಂಗನಗೌಡ ಪಾಟೀಲ ಅವರು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ನವದೆಹಲಿಯ ಸಂಸತ್ ಭವನದ ಅನಕ್ಸ್‌ನ ಮುಖ್ಯ ಸಮಿತಿ ಕೊಠಡಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಮ್ಮೇಳನದ ಸಿದ್ಧತೆಗಳು, ಸಂಸದೀಯ ವ್ಯವಹಾರಗಳು ಹಾಗೂ ಸಂಸದೀಯ ಸಂಪ್ರದಾಯಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕದ ನಿಯೋಗವನ್ನು ಮುನ್ನಡೆಸಲಿರುವ ಸಭಾಧ್ಯಕ್ಷರು, ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಪರಿಣಾಮಕಾರಿಯಾಗಿ ಭಾಗವಹಿಸುವುದು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಸಂಸದೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವುದು ಹಾಗೂ ಕಾಮನ್‌ವೆಲ್ತ್ ರಾಷ್ಟ್ರಗಳ ನಡುವಿನ ಸಂಸದೀಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮ್ಮೇಳನದ ಮಹತ್ವದ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್ ನಾರಾಯಣ್ ಸಿಂಗ್ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆಗಳ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಶ್ರೀ ಸಲೀಂ ಅಹ್ಮದ್ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment