* ಸಿಆರ್‌ಪಿ ಸುಳ್ಳು ವರದಿ ನೀಡಲು ಕೈಬೆಚ್ಚಗಾಗಿಸಿದ್ರಾ ದಂಧೆಕೋರರು? ಅಧಿಕಾರಿ-ಅಕ್ರಮದ ಜುಗಲ್‌ಬಂದಿ!
* "ಅಧಿಕಾರಿಗಳ ಮಿಲಾಫಿ ಇಲ್ಲದೆ ಅಕ್ರಮ ಸಾಧ್ಯವಿಲ್ಲ, ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ": ದಲಿತ ಮುಖಂಡ ದುರಗಪ್ಪ ಮಾದರ ಆಕ್ರೋಶ.
ಕ್ರಾಂತಿಸೂರ್ಯ ನ್ಯೂಸ್ ಕುಷ್ಟಗಿ:
ತಾಲೂಕಿನ ಹನುಮನಾಳ ಪಟ್ಟಣದ ಶ್ರೀ ಚನ್ನಬಸವೇಶ್ವರ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಯಾವುದೇ ಪರವಾನಗಿ ಇಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ "ಜ್ಞಾನ ಸಹ್ಯಾದ್ರಿ ಕೋಚಿಂಗ್ ಸೆಂಟರ್" ಮತ್ತು ಅನಧಿಕೃತ ಹಾಸ್ಟೆಲ್ ದಂಧೆಯ ಹಿಂದೆ ಶಿಕ್ಷಣ ಇಲಾಖೆಯ ಕೆಳಹಂತದ ಅಧಿಕಾರಿಗಳ ಭ್ರಷ್ಟಾಚಾರದ ವಾಸನೆ ಬಲವಾಗಿ ಬೀಸತೊಡಗಿದೆ. ಅಧಿಕಾರಿಗಳ ಕಣ್ಣೆದುರೇ 130ಕ್ಕೂ ಹೆಚ್ಚು ಬಡ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದ್ದರೂ, ಇಲಾಖೆ ಮಾತ್ರ ಉಡಾಫೆ ವರದಿ ನೆಪವೊಡ್ಡಿ ನುಣುಚಿಕೊಳ್ಳಲು ಯತ್ನಿಸುತ್ತಿದೆ.
ಬಿಇಓ ಉಮಾದೇವಿ ಅವರ ಬೇಜವಾಬ್ದಾರಿ ಹೇಳಿಕೆ!
ಈ ಗಂಭೀರ ಹಗರಣದ ಕುರಿತು 'ಕ್ರಾಂತಿಸೂರ್ಯ ನ್ಯೂಸ್' ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಉಮಾದೇವಿ ಬಿ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಶ್ನಿಸಿದಾಗ, ಅವರು ನೀಡಿದ ಬೇಜವಾಬ್ದಾರಿ ಉತ್ತರ ಇಲಾಖೆಯ ನಡೆಗೆ ಹಿಡಿದ ಕನ್ನಡಿಯಾಗಿದೆ.
"ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲು ನಮ್ಮ ಸಿಆರ್‌ಪಿ (CRP) ಅವರಿಗೆ ಸೂಚಿಸಲಾಗಿತ್ತು. ಆದರೆ, ಅಲ್ಲಿ ಯಾವುದೇ ಸರ್ಕಾರಿ ಶಾಲೆಯ ಮಕ್ಕಳಿಗೆ ಕೋಚಿಂಗ್ ನೀಡಲಾಗುತ್ತಿಲ್ಲ ಎಂದು ಅವರು ವರದಿ ನೀಡಿದ್ದಾರೆ" ಎಂದು ಬಿಇಓ ಉಮಾದೇವಿ ಅವರು ತಮಗೇನೂ ತಿಳಿಯದಂತೆ ಜಾರಿಕೊಂಡಿದ್ದಾರೆ.
ಸಿಆರ್‌ಪಿ ಕೈಬೆಚ್ಚಗಾಗಿಸಿದರೇ ದಂಧೆಕೋರರು? ಬಯಲಾಯ್ತು ವಾಸ್ತವ!
ಬಿಇಓ ಅವರು ನೀಡಿದ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕ್ರಾಂತಿಸೂರ್ಯ ನ್ಯೂಸ್ ತಂಡ ಸ್ಥಳೀಯವಾಗಿ ತಳಮಟ್ಟದ ತನಿಖೆ ನಡೆಸಿದಾಗ ಕಹಿಸತ್ಯ ಬಯಲಾಗಿದೆ. ಹನುಮನಾಳ, ಜಹಗೀರ್ ಗುಡದೂರು, ಮಾಲಗಿತ್ತಿ, ತುಗ್ಗಳಡೋಣಿ, ಶಾಡಲಗೇರಿ, ಬಾದಿಮನಾಳ ಹಾಗೂ ಗುಡದೂರು ಕಲ್ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿ ಇರುವ ಮಕ್ಕಳೇ ಇಲ್ಲಿ ಬೀಡು ಬಿಟ್ಟಿರುವುದು ನೂರಕ್ಕೆ ನೂರರಷ್ಟು ನಿಜ ಎಂಬುದು ಸಾಬೀತಾಗಿದೆ.
ಮೂಲಗಳ ಪ್ರಕಾರ, ಸ್ಥಳ ಪರಿಶೀಲನೆಗೆ ಹೋದ ಸಿಆರ್‌ಪಿ, ಕೋಚಿಂಗ್ ಸೆಂಟರ್ ಮಾಲೀಕರಿಂದ ದಪ್ಪಗಿನ ಕವರ್ ಪಡೆದು, ಎಸಿ ರೂಮಿನಲ್ಲಿ ಕುಳಿತು ದಂಧೆಕೋರರ ಪರವಾಗಿ ಇಲಾಖೆಗೆ ಸುಳ್ಳು ವರದಿ ಸೃಷ್ಟಿಸಿ ಒಪ್ಪಿಸಿದ್ದಾರೆ. ತಳಮಟ್ಟದ ಅಧಿಕಾರಿಗಳು ಮತ್ತು ಅಕ್ರಮ ಕೋಚಿಂಗ್ ದಂಧೆಕೋರರ ನಡುವಿನ ಈ ಅಪವಿತ್ರ ಮೈತ್ರಿಯೇ ಈಗ ನೂರಾರು ಮಕ್ಕಳ ಸುರಕ್ಷತೆಯನ್ನು ಅಪಾಯಕ್ಕೆ ದೂಡಿದೆ.
ಉಗ್ರ ಹೋರಾಟದ ಎಚ್ಚರಿಕೆ: ದಲಿತ ಮುಖಂಡ ದುರಗಪ್ಪ ಮಾದರ ಆಕ್ರೋಶ
ಈ ಮಹಾ ವಂಚನೆ ಮತ್ತು ಅಧಿಕಾರಿಗಳ ಶಾಮೀಲಾತಿ ಕುರಿತು 'ಕ್ರಾಂತಿಸೂರ್ಯ ನ್ಯೂಸ್' ಜೊತೆ ಮಾತನಾಡಿದ ಪ್ರಮುಖ ದಲಿತ ಮುಖಂಡರಾದ ದುರಗಪ್ಪ ಮಾದರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಬಿಟ್ಟು ಈ ಅನಧಿಕೃತ ಹಾಸ್ಟೆಲ್ ಮತ್ತು ಕೋಚಿಂಗ್ ಸೆಂಟರ್‌ನಲ್ಲಿ ಇರುವುದು ಜಗಜ್ಜಾಹೀರಾಗಿದೆ. ಆದರೆ ತನಿಖೆಗೆ ಹೋದ ಸಿಆರ್‌ಪಿ ದಂಧೆಕೋರರಿಂದ ಹಣ ಪಡೆದು ಇಲಾಖೆಗೆ ಕಣ್ಣು ಒರೆಸುವ ಸುಳ್ಳು ವರದಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಶ್ರೀರಕ್ಷೆ ಮತ್ತು ಮಿಲಾಫಿ ಇಲ್ಲದೆ ಇಷ್ಟು ದೊಡ್ಡ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಈ ಕೂಡಲೇ ಉನ್ನತ ಮಟ್ಟದ ಪ್ರಾಮಾಣಿಕ ತನಿಖೆ ನಡೆಸಿ ಕೋಚಿಂಗ್ ಸೆಂಟರ್ ಮುಚ್ಚಿಸದಿದ್ದರೆ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಇಲಾಖೆಯ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು" ಎಂದು ದುರಗಪ್ಪ ಮಾದರ ಎಚ್ಚರಿಸಿದ್ದಾರೆ.
ಅಮಾಯಕ ಮಕ್ಕಳ ಭವಿಷ್ಯವನ್ನು ಬಂಡವಾಳ ಮಾಡಿಕೊಂಡಿರುವ ಜ್ಞಾನ ಸಹ್ಯಾದ್ರಿ ಕೋಚಿಂಗ್ ಸೆಂಟರ್ ಹಾಗೂ ಅದಕ್ಕೆ ಬೆಂಬಲವಾಗಿ ನಿಂತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
**
Post a Comment