⚡ಟ್ರೆಂಡಿಂಗ್ಸ್

ಬಿಡುವಿನ ವೇಳೆಯಲ್ಲಿ ಉದ್ಯೋಗದ ಜೊತೆಗೆ ದಾಳಿಂಬೆ ಕೃಷಿ ಕ್ರಾಂತಿ ಯಶಸ್ವಿ : ಮೂಗನೂರ ರೈತ

ಬಿಡುವಿನ ವೇಳೆಯಲ್ಲಿ ಉದ್ಯೋಗದ ಜೊತೆಗೆ ದಾಳಿಂಬೆ ಕೃಷಿ ಕ್ರಾಂತಿ ಯಶಸ್ವಿ : ಮೂಗನೂರ ರೈತ

ಕುಷ್ಟಗಿ:"ಮನಸ್ಸಿದ್ದರೆ ಮಾರ್ಗ" ಎಂಬ ನಾಣ್ಣುಡಿಯನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ, ಹಿರೇಗೊಣ್ಣಗರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಗನೂರ ಗ್ರಾಮದ ಪ್ರಗತಿಪರ ರೈತ ಹಾಗೂ ತಾಲೂಕು ಪಂಚಾಯತ್ ಉದ್ಯೋಗಿ ಶ್ರೀ ಮಾದೇಗೌಡ ಪೊಲೀಸ್ ಪಾಟೀಲ್. ಉದ್ಯೋಗದ ನಡುವೆಯೂ ಆಧುನಿಕ ತಂತ್ರಜ್ಞಾನ ಬಳಸಿ, ಬರಡು ಭೂಮಿಯಲ್ಲಿ ಲಕ್ಷ ಮೌಲ್ಯದ ದಾಳಿಂಬೆ ಬೆಳೆದು ತಾಲೂಕಿನ ಗಮನ ಸೆಳೆದಿದ್ದಾರೆ.

ಹಿನ್ನೆಲೆ ಮತ್ತು ಹಂಬಲ:
ಕುಷ್ಟಗಿ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಮೂಗನೂರಿನ ಮಾದೇಗೌಡ ಅವರು ಪಕ್ಕದ ಗಜೇಂದ್ರಗಡ ತಾಲೂಕಿನ ಜಿಗೇರಿ ಸೀಮಾದಲ್ಲಿ 4 ಎಕರೆ 35 ಗುಂಟೆ ಸ್ವಂತ ಜಮೀನು ಹೊಂದಿದ್ದಾರೆ. ಈ ಜಮೀನು ಕೆಂಪು ಹಾಗೂ ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ್ದು, ಕಳೆದ 45 ವರ್ಷಗಳಿಂದ ಕೇವಲ ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ಮಾತ್ರ ಬೆಳೆಯಲಾಗುತ್ತಿತ್ತು. ಆದರೆ, 4 ವರ್ಷಗಳ ಹಿಂದೆ ಕೊರೆಸಿದ ಬೋರ್‌ವೆಲ್‌ನಲ್ಲಿ 2.5 ಇಂಚು ನೀರು (ಗಂಗಾಮಾತೆ) ಲಭ್ಯವಾದಾಗ, ಮಾದೇಗೌಡ ಅವರಿಗೆ ತೋಟಗಾರಿಕಾ ಬೆಳೆ ಬೆಳೆಯಬೇಕೆಂಬ ಹಂಬಲ ತೀವ್ರವಾಯಿತು.

 ಮಾರ್ಗದರ್ಶನ ಮತ್ತು ದಾಳಿಂಬೆ ನಾಟಿ:
ಪ್ರತಿನಿತ್ಯ ಕೆಲಸಕ್ಕೆ ಹೋಗುವ ದಾರಿಯಲ್ಲಿ ಸಿಗುವ ಪ್ರಗತಿಪರ ರೈತರೊಂದಿಗೆ ಚರ್ಚಿಸಿ, ಅಂತಿಮವಾಗಿ ದಾಳಿಂಬೆ ಬೆಳೆಯಲು ನಿರ್ಧರಿಸಿದರು. ಕುಷ್ಟಗಿಯ ಕೃಷಿ ಕನ್ಸಲ್ಟೆಂಟ್ ಸಮೀರ್ ಸರ್ ಹಾಗೂ ಇವರ ಚಿಕ್ಕಪ್ಪ, ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಪಂಚಮಸಾಲಿ ಸಮಾಜದ ಪ್ರಭಾವಿ ರಾಜಕೀಯ ಮುಖಂಡರಾದ ಶ್ರೀ ಅಶೋಕಪ್ಪ ಬಳೂಟಗಿ ಇವರ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನದಲ್ಲಿ 1400 'ಕ್ಯಾಡಿಲ್' ತಳಿಯ ದಾಳಿಂಬೆ ಸಸಿಗಳನ್ನು ತಂದು, ಗಿಡದಿಂದ ಗಿಡಕ್ಕೆ 8 ಅಡಿ ಮತ್ತು ಸಾಲಿನಿಂದ ಸಾಲಿಗೆ 15 ಅಡಿ ಅಂತರದಲ್ಲಿ ವೈಜ್ಞಾನಿಕವಾಗಿ ನಾಟಿ ಮಾಡಿದರು.

ಆಧುನಿಕ ತಂತ್ರಜ್ಞಾನ ಹಾಗೂ ಭದ್ರತೆ:
ಕಳೆದ 2 ವರ್ಷಗಳ ಕಾಲ ಸಸಿಗಳನ್ನು ಮಕ್ಕಳಿಗಿಂತಲೂ ಹೆಚ್ಚಾಗಿ ಲಾಲನೆ-ಪಾಲನೆ ಮಾಡಿ, ತದನಂತರ 'ಎತ್ರೆಲ್' ಸಿಂಪಡಣೆ ಮಾಡಿ ಹಣ್ಣಿಗೆ ಬಿಡಲಾಗಿದೆ. ತೋಟದ ನಿರ್ವಹಣೆಗಾಗಿ ಸುಧಾರಿತ ತಂತ್ರಜ್ಞಾನ ಬಳಸಲಾಗಿದ್ದು, ಜೈನ ಕಂಪನಿಯ ಅಂಡರ್‌ಗ್ರೌಂಡ್ ಪೈಪ್‌ಲೈನ್, ಡಬಲ್ ಲ್ಯಾಟರಲ್ ಪೈಪ್‌ಗಳ ಮುಖಾಂತರ ಡ್ರಿಪ್ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಡೀಸೆಲ್ ಎಂಜಿನ್ ಮುಖಾಂತರ ಗಿಡಗಳಿಗೆ ಔಷಧ ಸಿಂಪಡಿಸಲಾಗುತ್ತಿದೆ. ತೋಟದ ಭದ್ರತೆಗಾಗಿ ಸುತ್ತಲೂ ಸೋಲಾರ್ ತಂತಿ ಬೇಲಿ, ಗ್ರೀನ್ ಮೆಶ್ ಹಾಗೂ 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ತೋಟದಲ್ಲೇ ಹೊಸದೊಂದು ಮನೆಯನ್ನೂ ನಿರ್ಮಿಸಲಾಗಿದೆ. ಈ ಆಧುನಿಕ ಕೃಷಿಗಾಗಿ ಸರಿ ಸುಮಾರು 30 ಲಕ್ಷಕ್ಕೂ ಹೆಚ್ಚು ಹಣವನ್ನು ಹೂಡಿಕೆ ಮಾಡಲಾಗಿದೆ.

ಆದಾಯ ಮತ್ತು ಹೂಡಿಕೆ:
ಮೊದಲನೇ ಬೆಳೆಯಿಂದ ಭರ್ಜರಿ 15 ಲಕ್ಷ ರೂ. ಆದಾಯ ಬಂದಿದ್ದು, ಉಳಿದ 15 ಲಕ್ಷ ರೂ. ಸಾಲವನ್ನು ಈ ಬಾರಿ ತೀರಿಸುವ ಹಂಬಲದಲ್ಲಿದ್ದಾರೆ. ಪ್ರಸ್ತುತ ವರ್ಷದಲ್ಲಿ ಮತ್ತೆ 5 ಲಕ್ಷ ರೂ. ಹೂಡಿಕೆ ಮಾಡಲಾಗಿದ್ದು, ಒಟ್ಟು 20 ಲಕ್ಷ ರೂ. ಖರ್ಚಿನೊಂದಿಗೆ ಈ ವರ್ಷದ ಪಸಲು ಉತ್ತಮವಾಗಿದ್ದು, ಬಂಪರ್ ಲಾಭಾಂಶದ ನಿರೀಕ್ಷೆಯಲ್ಲಿದ್ದಾರೆ.

 ಇಡೀ ಕುಟುಂಬದ ಶ್ರಮ-ಸಹಕಾರ:
ಈ ಸಾಧನೆಯ ಹಿಂದೆ ಇಡೀ ಕುಟುಂಬದ ಶ್ರಮವಿದೆ. ಮಾದೇಗೌಡ ಅವರ ತಾಯಿ ಶ್ರೀಮತಿ ಅಮರಮ್ಮ ಪೊಲೀಸ್ ಪಾಟೀಲ್ ಅವರು ಪ್ರತಿನಿತ್ಯ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:30 ರವರೆಗೆ ತೋಟದಲ್ಲೇ ಇದ್ದು, ಕಳೆ ತೆಗೆಯುವುದು, ಸ್ವಚ್ಛತೆ ಹಾಗೂ ವಾಲ್ ಬದಲಾಯಿಸಿ ನೀರು ಹರಿಸುವ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ಉನ್ನತ ಶಿಕ್ಷಣ (B.A, B.Ed, MSW) ಮುಗಿಸಿ 2013 ರಿಂದ ಪ್ರಸ್ತುತ 2026 ರವರೆಗೆ ಕುಷ್ಟಗಿ ತಾಲೂಕು ಪಂಚಾಯತಿಯಲ್ಲಿ ಸಂಜೀವಿನಿ NRLM ಯೋಜನೆಯಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಾದೇಗೌಡ ಹಾಗೂ ಅವರ ಧರ್ಮಪತ್ನಿ (D.Ed, B.A ಇಂಗ್ಲಿಷ್ ಪದವೀಧರೆ) ಹನುಮಸಾಗರದ ಬಡವರ ಬಂಧು ಪತ್ತಿನ ಸೌಹಾರ್ದ ಬ್ಯಾಂಕಿನ ಸಿಇಒ ಹಾಗೂ ಮ್ಯಾನೇಜರ್ ಆಗಿರುವ ಶ್ರೀಮತಿ ದಂಪತಿಗಳು ಪ್ರತಿನಿತ್ಯ ಬೆಳಿಗ್ಗೆ 5:30 ರಿಂದ 8:30 ರವರೆಗೆ ತೋಟಕ್ಕೆ ಭೇಟಿ ನೀಡಿ ಸ್ವಚ್ಛತೆ, ಗಿಡಗಳಿಗೆ 4 ದಿನಕ್ಕೊಮ್ಮೆ ಸ್ಪ್ರೇ ಮಾಡುವುದು ಮತ್ತು ಡ್ರಿಪ್ ಮುಖಾಂತರ ಔಷಧ ಕೊಡುವ ಕಾಯಕ ಮುಗಿಸಿ, ನಂತರ ತಮ್ಮ ಕಚೇರಿ ಕರ್ತವ್ಯಕ್ಕೆ ಹಾಜರಾಗುತ್ತಾರೆ.
ಉದ್ಯೋಗಸ್ಥರೂ ಕೂಡ ಮನಸ್ಸು ಮಾಡಿದರೆ ಕೃಷಿಯಲ್ಲಿ ಹೇಗೆ ಯಶಸ್ಸು ಕಾಣಬಹುದು ಎಂಬುದಕ್ಕೆ ಪೊಲೀಸ್ ಪಾಟೀಲ್ ಕುಟುಂಬದ ಈ ದಾಳಿಂಬೆ ತೋಟವೇ ಸಾಕ್ಷಿಯಾಗಿದೆ.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...