ನವೋದಯ ಶಾಲೆಗೆ ವಿದ್ಯಾರ್ಥಿ ಆಯ್ಕೆ — ಗ್ರಾಮಕ್ಕೆ ಹೆಮ್ಮೆಯ ಕ್ಷಣ
ಗದಗವಾಣಿ ಸುದ್ದಿಮೂಲ
ಗಜೇಂದ್ರಗಡ: ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ದ್ವಿಭಾಷಾ ಮಾಧ್ಯಮ ಪ್ರಾಥಮಿಕ ಶಾಲೆಯ ಪ್ರತಿಭಾವಂತ 5ನೇ ತರಗತಿ ವಿದ್ಯಾರ್ಥಿ ಸಾತ್ವಿಕ ಮ್ಯಾಗೇರಿ ಅವರು 2026-27ನೇ ಸಾಲಿನ ಜವಾಹಾರ ನವೋದಯ ವಿದ್ಯಾಲಯ (JNV) ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಆಯ್ಕೆಯಾಗಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.
ಗ್ರಾಮೀಣ ಪ್ರದೇಶದ ಸರಳ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾತ್ವಿಕ, ತಮ್ಮ ಪರಿಶ್ರಮ, ಶ್ರದ್ಧೆ ಮತ್ತು ಗುರುಗಳ ಮಾರ್ಗದರ್ಶನದ ಮೂಲಕ ಈ ಸಾಧನೆಯನ್ನು ಮಾಡಿರುವುದು ವಿಶೇಷ. ಸ್ಪರ್ಧಾತ್ಮಕ ಪರೀಕ್ಷೆಯಾದ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಠಿಣವಾದದ್ದಾಗಿದ್ದು, ಇಂತಹ ಸಾಧನೆ ವಿದ್ಯಾರ್ಥಿಯ ಸಾಮರ್ಥ್ಯವನ್ನು ತೋರಿಸುತ್ತದೆ.
ಈ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ಎ. ಆರ್. ಚವಡಿ ಪ್ರಕಟಣೆಯಲ್ಲಿ ತಿಳಿಸಿ, “ಸಾತ್ವಿಕ ಮ್ಯಾಗೇರಿ ಅವರು ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ಅವರ ನಿರಂತರ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ,” ಎಂದು ಸಂತೋಷ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ, ಸಾತ್ವಿಕ ಅವರ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ, ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಕೂಡ ಸೂಕ್ತ ಮಾರ್ಗದರ್ಶನ ಮತ್ತು ಪರಿಶ್ರಮದಿಂದ ಉನ್ನತ ಮಟ್ಟದ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಸಾತ್ವಿಕ ಮ್ಯಾಗೇರಿ ಅವರು ಸ್ಪಷ್ಟ ಉದಾಹರಣೆಯಾಗಿದ್ದಾರೆ. ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
Post a Comment