⚡ಟ್ರೆಂಡಿಂಗ್ಸ್

ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಬಲ: ರೋಣ ಎಂ.ಕೆ.ಪಿ.ಸಿ ಯಶಸ್ವಿ ಹೆಜ್ಜೆ

ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಬಲ: ರೋಣ ಎಂ.ಕೆ.ಪಿ.ಸಿ ಯಶಸ್ವಿ ಹೆಜ್ಜೆ

ಗದಗವಾಣಿ ಸುದ್ದಿಮೂಲ
ರೋಣ:

 ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ರೋಣ ತಾಲ್ಲೂಕಿನಲ್ಲಿ ಆರಂಭಗೊಂಡಿರುವ ಮಹಿಳಾ ರೈತ ಉತ್ಪಾದಕ ಕಂಪನಿಗಳು (MKPC) ಗಮನಾರ್ಹ ಸಾಧನೆ ಮಾಡುತ್ತಿವೆ. ಮಹಿಳೆಯರನ್ನು ಸಂಘಟಿಸಿ ವ್ಯವಹಾರ ಕ್ಷೇತ್ರಕ್ಕೆ ಕರೆತರುವ ಉದ್ದೇಶದಿಂದ ಸ್ಥಾಪಿತವಾದ ಈ ಕಂಪನಿಗಳು ಆರ್ಥಿಕ ಸಬಲಿಕರಣದ ದಿಕ್ಕಿನಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿವೆ.

ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಧೀನದಲ್ಲಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಯೋಜನೆಯಡಿ ಮಹಿಳಾ ಉತ್ಪಾದಕ ಕಂಪನಿಗಳನ್ನು ರಾಜ್ಯದಾದ್ಯಂತ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಅದರ ಭಾಗವಾಗಿ ಗದಗ ಜಿಲ್ಲೆಯಲ್ಲಿ ರೋಣ ಹಾಗೂ ಗದಗ ತಾಲ್ಲೂಕುಗಳಲ್ಲಿ ಕಂಪನಿಗಳು ಆರಂಭಗೊಂಡಿವೆ.

ರೋಣ ತಾಲ್ಲೂಕಿನಲ್ಲಿ 13 ಗ್ರಾಮ ಪಂಚಾಯಿತಿ ಒಕ್ಕೂಟಗಳಡಿ ಸುಮಾರು 1000 ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ಒಳಗೊಂಡು ಕಂಪನಿ ಸ್ಥಾಪನೆಯಾಗಿದೆ. ಪ್ರತಿ ಸದಸ್ಯರಿಂದ ರೂ.1500 ಶೇರು ಮೊತ್ತ ಸಂಗ್ರಹಿಸಿ ಒಟ್ಟು ರೂ.15 ಲಕ್ಷ ಬಂಡವಾಳದೊಂದಿಗೆ ಕಂಪನಿ ನೋಂದಾಯಿಸಲಾಗಿದೆ.

ಕಂಪನಿಯ ನಿರ್ವಹಣೆಗೆ ಸಿಇಒ, ಅಕೌಂಟೆಂಟ್ ಸೇರಿದಂತೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಮೂರು ವರ್ಷದ ಅವಧಿಗೆ ರೂ.39 ಲಕ್ಷ ಅನುದಾನವನ್ನು ಎನ್‌ಆರ್‌ಎಲ್‌ಎಂ ಮೂಲಕ ನೀಡಲಾಗಿದೆ. ರಸಗೊಬ್ಬರ, ಕೀಟನಾಶಕ, ಬೀಜಗಳ ಮಾರಾಟದ ಜೊತೆಗೆ ರೈತರಿಗೆ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ.

11 ಮಹಿಳಾ ನಿರ್ದೇಶಕರಿಂದ ಕಂಪನಿ ನಿರ್ವಹಣೆ ನಡೆಯುತ್ತಿದ್ದು, ಲಾಭವನ್ನು ಮರುಹೂಡಿಕೆ ಮಾಡುವ ಮೂಲಕ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ತಾಡ್‌ಪಾಳದ ‘ಹಳ್ಳಿ ರುಚಿ’ ಎಣ್ಣೆ, ಗದಗಿನ ಕಾರದಪುಡಿ, ಹಾಗೂ ಗುಲಾಬಿ ಹೂಗಳಿಂದ ತಯಾರಿಸಿದ ಬುಕೆಗಳ ಮಾರಾಟ ಮೂಲಕ ಕಂಪನಿ ವಾರ್ಷಿಕ ರೂ.12 ಲಕ್ಷ ವ್ಯವಹಾರ ನಡೆಸುತ್ತಿದೆ.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ ಅವರು, “ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಉದ್ಯೋಗ ಸೃಷ್ಟಿಗೆ ಕಂಪನಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.

ಕಂಪನಿಯ ನಿರ್ದೇಶಕಿ ಪುಷ್ಪಾವತಿ ವಜ್ಜಲಬಂಡಿ ಅವರು, “ಆರಂಭದಲ್ಲಿ ಭಯವಿದ್ದರೂ, ಈಗ ಸ್ವತಂತ್ರವಾಗಿ ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಸಂತೋಷ ವ್ಯಕ್ತಪಡಿಸಿದರು.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...