18 ವರ್ಷಗಳ ಬಳಿಕ ಗ್ರಾಮ ದೇವಿಯರ ಹರಿ ಜಾತ್ರೋತ್ಸವ: ವಿಧ್ಯುಕ್ತ ಚಾಲನೆ
ಗದಗ: 18 ವರ್ಷಗಳ ಬಳಿಕ ಆಯೋಜಿಸಿರುವ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರುಗವ್ವ ಹರಿಜಾತ್ರೋತ್ಸವಕ್ಕೆ ನಗರದ ಒಕ್ಕಲಗೇರಿ ಓಣಿಯಲ್ಲಿರುವ ದೇವಿಯರ ದೇವಸ್ಥಾನದಲ್ಲಿ ಮಂಗಳವಾರ ವಿಧ್ಯುಕ್ತ ಚಾಲನೆ ದೊರೆಯಿತು.
ದೇವಿಯರ ಗಂಡನ ಮನೆ ಎಂದು ಕರೆಯಲಾಗುವ ಕಿಲ್ಲಾ ಓಣಿಯ ದೇವಸ್ಥಾನದಿಂದ, ತವರು ಮನೆ ಎಂದು ಕರೆಯಲಾಗುವ ಒಕ್ಕಲಗೇರಿ ಓಣಿಯ ದೇವಸ್ಥಾನಕ್ಕೆ ಮೂರ್ತಿಗಳನ್ನು ತಂದು, ಮಂಗಳವಾರ ಮುಂಜಾನೆ ಪ್ರತಿಷ್ಠಾಪನೆ ಮಾಡಲಾಯಿತು.
ದೇವಿಯರ ಮೂರ್ತಿಗಳಿಗೆ ಜೀವಕಳೆ ತುಂಬಿದ ಬಳಿಕ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಯಿತು. ಒಂಭತ್ತು ಬಗೆಯ ಧಾನ್ಯಗಳನ್ನಿಟ್ಟು, ರುದ್ರಾಭಿಷೇಕ ನೆರವೇರಿಸಲಾಯಿತು. ಸಂಪ್ರದಾಯದಂತೆ ಗೌಡರ ಮನೆತನದಿಂದ ಮೊದಲ ಪೂಜೆ ಜರುಗಿತು. ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಪೂಜೆ ಮಾಡಿದ ಬಳಿಕ, ಮಹಿಳೆಯರು ಭಕ್ತಿಯಿಂದ ಉಡಿ ತುಂಬಿ, ಪೂಜೆ ಸಲ್ಲಿಸಿದರು.
'ಶತಮಾನಗಳ ಇತಿಹಾಸವುಳ್ಳ ದೇವಿಯರ ಹರಿ ಜಾತ್ರೋತ್ಸವವು ಪ್ರತಿ 12 ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಕೋವಿಡ್ ಸಮಯದಲ್ಲಿ ಜಾತ್ರೆ ಆಯೋಜನೆ ತಡವಾಯಿತು. ಇದೀಗ 18 ವರ್ಷಗಳ ಬಳಿಕ ಜಾತ್ರೆ ವಿಜೃಂಭಣೆಯಿಂದ ಜರುಗುತ್ತಿದೆ. ಆಗಸ್ಟ್ 25ರವರೆಗೆ ದೇವಿಯರಿಗೆ ಮಹಿಳೆಯರು ಉಡಿ ತುಂಬುತ್ತಾರೆ. 25ರಂದು ದೇವಸ್ಥಾನದಿಂದ ಮಹಿಳೆಯರಿಗೆ ಉಡಿ ತುಂಬಲಾಗುತ್ತದೆ. 26ರಂದು ಅದ್ದೂರಿ ಮೆರವಣಿಗೆ ಮೂಲಕ ದೇವಿಯರನ್ನು ಕಿಲ್ಲಾ ಓಣಿಗೆ ಕಳುಹಿಸಿಕೊಡಲಾಗುತ್ತದೆ' ಎಂದು ದೇವಸ್ಥಾನದ ಅರ್ಷಕ ಗಣೇಶ ಬಡಿಗೇರ ತಿಳಿಸಿದರು.
Post a Comment