ಗದಗದಲ್ಲಿ 18 ವರ್ಷಗಳ ಬಳಿಕ ದ್ಯಾಮವ್ವ–ದುರಗಮ್ಮ ದೇವಿಯರ ಹರಿಜಾತ್ರೆ
ಆ.18ರಿಂದ 28ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ; ಆ.18ರಿಂದ 26ರವರೆಗೆ ಮಹಾ ಅನ್ನಸಂತರ್ಪಣೆ
ಗದಗ: ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿಯ ಗ್ರಾಮದೇವತೆಗಳಾದ ದ್ಯಾಮವ್ವ ಹಾಗೂ ದುರಗಮ್ಮ ದೇವಿಯರ ಹರಿಜಾತ್ರೋತ್ಸವಕ್ಕೆ ನಗರ ಸಜ್ಜಾಗುತ್ತಿದೆ. ಬರೋಬ್ಬರಿ 18 ವರ್ಷಗಳ ಬಳಿಕ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯು ಆ.18ರಿಂದ 28ರವರೆಗೆ ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ಜನಪದ ಸಂಭ್ರಮದೊಂದಿಗೆ ಜರುಗಲಿದೆ.
ನಗರದ ದ್ಯಾಮವ್ವ–ದುರಗವ್ವ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮದೇವಿಯರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅವರು ಜಾತ್ರೆಯ ರೂಪುರೇಷೆಗಳನ್ನು ವಿವರಿಸಿದರು.
12 ವರ್ಷಕ್ಕೊಮ್ಮೆ ನಡೆಯುವ ಸಂಪ್ರದಾಯ
ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಗ್ರಾಮದೇವಿಯರ ಆರಾಧನಾ ಪರಂಪರೆಯ ಅಂಗವಾಗಿ ಪ್ರತಿ 12 ವರ್ಷಕ್ಕೊಮ್ಮೆ ಹರಿಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾತ್ರೆ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ 18 ವರ್ಷಗಳ ಬಳಿಕ ಅದ್ಧೂರಿಯಾಗಿ ಜಾತ್ರೆ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಆ.18ರಂದು ಮೂರ್ತಿಗಳ ಪ್ರತಿಷ್ಠಾಪನೆ
ಆ.18ರಂದು ದ್ಯಾಮವ್ವ ಹಾಗೂ ದುರಗಮ್ಮ ದೇವಿಯರ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಆ.18ರಿಂದ 25ರವರೆಗೆ ಪ್ರತಿದಿನ ಸಂಜೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಆ.18ರಿಂದ ಆ.26ರವರೆಗೆ ನಿರಂತರವಾಗಿ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುವುದು. ಆ.24ರಂದು ದ್ಯಾಮವ್ವನಕಟ್ಟಿಯಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಲಿದೆ.
ಆ.25ರಂದು ಮಹಿಳೆಯರಿಗೆ ಹಾಗೂ ನಗರದ ವಿವಿಧ ದೇವಸ್ಥಾನಗಳಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಕಲ ವಾದ್ಯಮೇಳದೊಂದಿಗೆ ದೇವಿಯರ ಮೆರವಣಿಗೆ
ಜಾತ್ರೆಯ ಪ್ರಮುಖ ಘಟ್ಟವಾದ ಆ.26ರಂದು ಬೆಳಿಗ್ಗೆ 11 ಗಂಟೆಗೆ ದೇವಿಯರ ಮೂರ್ತಿಗಳನ್ನು ಸಕಲ ವಾದ್ಯಮೇಳದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಕಿಲ್ಲಾದಲ್ಲಿರುವ ದ್ಯಾಮವ್ವ–ದುರಗಮ್ಮನ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಬಳಿಕ ಅಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ.
ಆ.27ರಂದು ಗಣ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆ.28ರಂದು ವಿಶೇಷ ಹೋಮ, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಮಂಗಳ ಹಾಡಲಾಗುವುದು.
ಪ್ರವಚನ, ಮಠಾಧೀಶರ ಉಪಸ್ಥಿತಿ
ಜಾತ್ರೆಯ ಅವಧಿಯಲ್ಲಿ ಅಸುಂಡಿಯ ನೀಲಮ್ಮ ಅವರಿಂದ ಪ್ರತಿದಿನ ಪ್ರವಚನ ನಡೆಯಲಿದೆ. ವಿವಿಧ ದಿನಗಳ ಸಭಾ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜಾತ್ರೆಯ ಅಂಗವಾಗಿ ದೇವಿಯರಿಗೆ ಭಕ್ತರ ವತಿಯಿಂದ ಬೆಳ್ಳಿ ಕಿರೀಟ ಹಾಗೂ ಡಾಬು ಸಮರ್ಪಿಸುವ ಧಾರ್ಮಿಕ ಕಾರ್ಯಕ್ರಮವೂ ನಡೆಯಲಿದೆ.
18 ವರ್ಷಗಳ ಬಳಿಕ ನಡೆಯುತ್ತಿರುವ ದ್ಯಾಮವ್ವ–ದುರಗಮ್ಮ ದೇವಿಯರ ಹರಿಜಾತ್ರೆ ಹಿನ್ನೆಲೆಯಲ್ಲಿ ಒಕ್ಕಲಗೇರಿ ಓಣಿ ಸೇರಿದಂತೆ ನಗರದಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದೆ. ಧಾರ್ಮಿಕ ಆಚರಣೆ, ಜನಪದ ಪರಂಪರೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆಯ ಮೂಲಕ ಜಾತ್ರೆಯು ಭಕ್ತಿಭಾವದ ಜೊತೆಗೆ ಸಾಮಾಜಿಕ ಸೌಹಾರ್ದದ ಸಂದೇಶ ಸಾರಲಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಮಿಟಿ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಲಗಿರಿ, ಉಪಾಧ್ಯಕ್ಷರಾದ ನಿಂಗಪ್ಪ ಪಡಗದ, ರಾಮಣ್ಣ ಫಲದೊಡ್ಡಿ, ಕೋಶಾಧ್ಯಕ್ಷ ವಿಜಯಕುಮಾರ ಗಡ್ಡಿ, ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ, ಶಿವಣ್ಣ ಕತ್ತಿ, ಮರಿಗೌಡ್ರ, ನಾಗಪ್ಪ ಗುಗ್ಗರಿ ಹಾಗೂ ವೀರಣ್ಣ ಮೇಟಿ ಪದಾಧಿಕಾರಿಗಳು, ಮುಖಂಡರು,ಸೇರಿದಂತೆ ಓಣಿಯ ಸಾರ್ವಜನಿಕರು, ಉಪಸ್ಥಿತರಿದ್ದರು.
Post a Comment