⚡ಟ್ರೆಂಡಿಂಗ್ಸ್

ಸಾಗರ ಪವಾರ ಕುಟುಂಬದ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ

ಸಾಗರ್ ಡಿ. ಪವಾರ್ ಕುಟುಂಬದ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಗದಗ, ಜೂನ್ 2: ಶಿಕ್ಷಣವೇ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಯಾಗಿದ್ದು, ಯಾವುದೇ ವಿದ್ಯಾರ್ಥಿ ಆರ್ಥಿಕ ಸಂಕಷ್ಟದ ಕಾರಣದಿಂದ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಮಹತ್ವದ ಆಶಯದೊಂದಿಗೆ ಸಾಗರ್ ಡಿ. ಪವಾರ್ ಅವರ ಕುಟುಂಬದ ವತಿಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಪುಸ್ತಕ, ಪೆನ್ಸಿಲ್ ಹಾಗೂ ಸ್ಕೆಚ್ ಪೆನ್‌ಗಳನ್ನು ವಿತರಿಸಲಾಯಿತು.

ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಕ್ರಾಂತಿ ಸೇನಾ ಗದಗ ಜಿಲ್ಲಾ ಸಂಘಟನೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ದಿವಂಗತ ಡಿ.ಎನ್. ಪವಾರ್ ಅವರ ಸ್ಮರಣಾರ್ಥ ಹಾಗೂ ಶ್ರೀಮತಿ ಶಾರದಾಬಾಯಿ ಡಿ. ಪವಾರ್ ಅವರ ಆಶೀರ್ವಾದದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಸುಮಾರು 1,000 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ ಸಾಗರ್ ಡಿ. ಪವಾರ್, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, "ನಾನು ವಿದ್ಯಾರ್ಥಿಯಾಗಿದ್ದಾಗ ತೀವ್ರ ಬಡತನವನ್ನು ಅನುಭವಿಸಿದ್ದೇನೆ. ಶಾಲೆಗೆ ಬೇಕಾದ ಬ್ಯಾಗ್ ಹಾಗೂ ಪುಸ್ತಕಗಳನ್ನು ಖರೀದಿಸಲು ಸಹ ಕಷ್ಟವಾಗುತ್ತಿತ್ತು. ಆ ನೋವು ನನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಯಾವುದೇ ಮಗು ಶಿಕ್ಷಣಕ್ಕಾಗಿ ಸಂಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬುದು ನಮ್ಮ ಆಶಯ" ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್‌ಎಸ್‌ಕೆ ಸಮಾಜದ ಹಿರಿಯ ಮುಖಂಡ ಈಶ್ವರಸಾ ಮೆರವಾಡೆ ಮಾತನಾಡಿ, "ಸಾಗರ್ ಪವಾರ್ ಅವರ ತಂದೆಯೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸಾಮಾನ್ಯ ಕುಟುಂಬದಿಂದ ಬೆಳೆದು ಬಂದ ಸಾಗರ್ ಪವಾರ್ ಅವರು ತಮ್ಮ ಪರಿಶ್ರಮ ಹಾಗೂ ಕುಟುಂಬದ ಆಶೀರ್ವಾದದೊಂದಿಗೆ ಸಮಾಜ ಸೇವೆಯಲ್ಲಿ ಮಾದರಿಯಾಗಿದ್ದಾರೆ. ಇಂತಹ ಯುವಕರು ಸಮಾಜಕ್ಕೆ ಪ್ರೇರಣೆಯಾಗುತ್ತಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರಾಂತಿ ಸೇನಾ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮಾತನಾಡಿ, "ಸಾಗರ್ ಪವಾರ್ ಅವರು ಸಮಾಜದ ಕಷ್ಟ-ಸುಖಗಳಲ್ಲಿ ಸದಾ ಕೈಜೋಡಿಸುವ ವ್ಯಕ್ತಿ. ಬಡವರ ಸೇವೆ, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಅವರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಗಳಿಗೆ ಸಮಾಜದ ಬೆಂಬಲ ಅಗತ್ಯ" ಎಂದು ಹೇಳಿದರು.

ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಸುಮಾರು 2,500ಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ನಡೆದಿದ್ದು ಸಾರ್ವಜನಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಬೆಟಗೇರಿ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಲೋಕನಾಥಸಾ ಕಬಾಡಿ, ಶ್ರೀ ಸಹಸ್ರಾರ್ಜುನ ಟ್ರಸ್ಟ್ ಸಮಿತಿ ಅಧ್ಯಕ್ಷ ವಿನೋದ್ ಭಾಂಡಗೆ, ಬಿಜೆಪಿ ಯುವ ಮುಖಂಡ ಸುಧೀರ್ ಕಾಟೀಗಾರ್, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ರೇಣುಕಾ ಎನ್. ಕಬಾಡಿ, ಶ್ರೀ ಬಾಲ ಮಾರುತಿ ಪಾಲಕಿ ಸೇವಾ ಸಮಿತಿ ಅಧ್ಯಕ್ಷ ಕಾಶಿನಾಥ ಸಿದ್ಲಿಂಗ, ಸರೋಜಬಾಯಿ ಟಿಕಂದರ್, ಶ್ರೀದೇವಿ ಕಬಾಡಿ, ಅಕ್ಷತಾ ಪವಾರ್ ಸೇರಿದಂತೆ ಅನೇಕ ಗಣ್ಯರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಮಾಜಮುಖಿ ಕಾರ್ಯಕ್ರಮವು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ಅಗತ್ಯವಿರುವ ಮಕ್ಕಳಿಗೆ ನೆರವಾಗುವ ಮಾನವೀಯ ಕಾರ್ಯವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...