⚡ಟ್ರೆಂಡಿಂಗ್ಸ್

ಹೆಲ್ಮೆಟ್ ಧರಿಸದಿದ್ದರೆ ಸಂಕಷ್ಟ ತಪ್ಪಿದ್ದಲ್ಲ: ಯಮದೂತ, ಚಿತ್ರಗುಪ್ತರ ವೇಷ ಧರಿಸಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ, ಗದಗ ಜಿಲ್ಲಾ ಪೊಲೀಸ್ ಇಲಾಖೆ!



ಹೆಲ್ಮೆಟ್ ಧರಿಸದಿದ್ದರೆ ಸಂಕಷ್ಟ ತಪ್ಪಿದ್ದಲ್ಲ: ಯಮದೂತ, ಚಿತ್ರಗುಪ್ತರ ವೇಷ ಧರಿಸಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ, ಗದಗ ಜಿಲ್ಲಾ ಪೊಲೀಸ್ ಇಲಾಖೆ!

ಗದಗ : ರಸ್ತೆ ಸುರಕ್ಷತೆ ಹಾಗೂ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಒಂದು ವಿಶೇಷ ಮತ್ತು ವಿಭಿನ್ನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಯಮದೂತ ಹಾಗೂ ಚಿತ್ರಗುಪ್ತನ ವೇಷಧಾರ ಮೂಲಕ ಜಾಗೃತಿ ಮೂಡಿಸಿದ್ದು ಈ ಅಭಿಯಾನದ ವಿಶೇಷವಾಗಿತ್ತು.
ವಿಭಿನ್ನ ಶೈಲಿಯ ಜಾಗೃತಿ ಅಭಿಯಾನ:
ನಗರದ ಪ್ರಮುಖ ರಸ್ತೆಗಳಾದ ಬಸವೇಶ್ವರ ಸರ್ಕಲ್, ನಾಮ ಜೋಶಿ ರಸ್ತೆ, ಟಂಗಾಕೋಟಿ, ಮಹೇಂದ್ರಕರ್ ಸರ್ಕಲ್ ಹಾಗೂ ಜನತಾ ಮಾರ್ಕೆಟ್ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದ ಯಮದೂತ ಮತ್ತು ಚಿತ್ರಗುಪ್ತ ವೇಷಧಾರಿಗಳು, "ಹೆಲ್ಮೆಟ್ ಧರಿಸದಿದ್ದರೆ ನೇರ ಯಮಲೋಕಕ್ಕೆ ಬರಬೇಕಾಗುತ್ತದೆ" ಎಂದು ಎಚ್ಚರಿಸುವ ಮೂಲಕ ವಿನೂತನವಾಗಿ ಬುದ್ಧಿ ಹೇಳಿದರು.


ಸಾರ್ವಜನಿಕರ ಮೆಚ್ಚುಗೆ: ಪೊಲೀಸ್ ಇಲಾಖೆಯ ಈ ವಿಭಿನ್ನ ಮತ್ತು ಸೃಜನಾತ್ಮಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ದಂಡ ವಿಧಿಸುವ ಬದಲು, ಈ ರೀತಿ ಮನವರಿಕೆ ಮಾಡಿಕೊಟ್ಟಿರುವುದು ವಾಹನ ಸವಾರರಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಬಾಕ್ಸ

"ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಲಾಯಿಸಬೇಕು. ನಿಮ್ಮ ಸುರಕ್ಷತೆ ನಮಗೆ ಮುಖ್ಯ."
ರೋಹನ್ ಜಗದೀಶ್ (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)

"ವಾಹನ ಸವಾರರು ಕೇವಲ ದಂಡದಿಂದ ಬಲಿಯಾಗಲು ಅಲ್ಲ, ತಮ್ಮ ಸ್ವಂತ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಧರಿಸುವುದು ನಿಮ್ಮ ಜೀವಕ್ಕೆ ಕವಚ."
ಮುರ್ತುಜಾ ಖಾದ್ರಿ (ಡಿವೈಎಸ್ಪಿ)


"ಪ್ರತಿಯೊಬ್ಬ ವಾಹನ ಸವಾರನೂ ಹೆಲ್ಮೆಟ್ ಧರಿಸಿಯೇ ಸಂಚರಿಸಬೇಕು. ಯಾವುದೇ ಕಾರಣಕ್ಕೂ ಸಂಚಾರಿ ನಿಯಮಗಳ ಉಲ್ಲಂಘನೆ ಆಗದಂತೆ ಜವಾಬ್ದಾರಿಯಿಂದ ವಾಹನ ಚಲಾಯಿಸಿ."
ಕಿರಣ್ ಕುಮಾರ್ ಎಸ್.ಕೆ.(ಟ್ರಾಫಿಕ್ ಪಿಎಸ್ಐ)

ವರದಿ :ಮುತ್ತಣ್ಣ ಭರಡಿ

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...