⚡ಟ್ರೆಂಡಿಂಗ್ಸ್

ಖಾಕಿ-ಖಾದಿ ನೆರಳಿನ ಮಹಾ ವಂಚಕಿ: ಗದಗನ ಗಂಗಿಮಡಿ ಪ್ರೇಮಾ ಗುಡಿ ಅಂಡ್ ಗ್ಯಾಂಗ್‌ನ ‘ಮಕ್ಮಲ್ ಟೋಪಿ’ ಜಾಲ ಬಯಲು!• ಸರ್ಕಾರಿ ನೌಕರಿ ಹೆಸರಲ್ಲಿ ‘ಸುಲಿಗೆ ಉದ್ಯೋಗ’: ನೂರಾರು ಬಡ ಮಹಿಳೆಯರ ಬಾಳಿಗೆ ಕೊಳ್ಳಿ ಇಟ್ಟ ಕಿರಾತಕಿ!

• ಖಾಕಿ-ಖಾದಿ ನೆರಳಿನ ಮಹಾ ವಂಚಕಿ: ಗದಗನ ಗಂಗಿಮಡಿ ಪ್ರೇಮಾ ಗುಡಿ ಅಂಡ್ ಗ್ಯಾಂಗ್‌ನ ‘ಮಕ್ಮಲ್ ಟೋಪಿ’ ಜಾಲ ಬಯಲು!
• ಸರ್ಕಾರಿ ನೌಕರಿ ಹೆಸರಲ್ಲಿ ‘ಸುಲಿಗೆ ಉದ್ಯೋಗ’: ನೂರಾರು ಬಡ ಮಹಿಳೆಯರ ಬಾಳಿಗೆ ಕೊಳ್ಳಿ ಇಟ್ಟ ಕಿರಾತಕಿ!
• 
• ​ಫೇಕ್ ಐಡಿ, ನಕಲಿ ಆರ್ಡರ್ ಕಾಪಿ: ಗದಗವನ್ನು ನಡುಗಿಸಿದ ಪ್ರೇಮಾ ಗುಡಿ ಅಂಡ್ ಗ್ಯಾಂಗ್‌ನ ಹಗಲು ದರೋಡೆ! 
• 
• ದಕ್ಷ ಎಸ್.ಪಿ ರೋಹನ ಜಗದೀಶ ಅವರೇ ಗಮನಿಸಿ: ದೂರು ಸ್ವೀಕರಿಸದ ಕೆಳಹಂತದ ಸಿಬ್ಬಂದಿಗೆ ಚಾಟಿ ಬೀಸುವುದು ಯಾವಾಗ?

• ಖಾಕಿ-ಖಾದಿ ಅಪವಿತ್ರ ಮೈತ್ರಿ: ಲೂಟಿಕೋರರ ಜೊತೆ ಶಾಮೀಲಾದ ಅಧಿಕಾರಿಗಳ ವಿರುದ್ಧ ತನಿಖೆಯಾಗಲಿ!

• ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ: ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಬೀದಿಗಿಳಿಯಲು ಸಜ್ಜಾದ ಗದಗ ಜನತೆ!

ಮಂಜುನಾಥ ಎಸ್.ರಾಠೋಡ ಗದಗ:

ಸಾವಿರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ, ಜಗದ್ಗುರುಗಳ ನಾಡು ಎಂದೇ ಪ್ರಸಿದ್ಧಿಯಾದ ಗದಗ ಜಿಲ್ಲೆ ಇಂದು ಮಹಾ ವಂಚಕಿಯೊಬ್ಬಳ ಜಾಲಕ್ಕೆ ಸಿಲುಕಿ ನಲುಗಿಹೋಗಿದೆ. 

"ಸರ್ಕಾರಿ ನೌಕರಿ ಕೊಡಿಸುತ್ತೇನೆ", "ಹೈನುಗಾರಿಕೆ ಸಾಲ ಮಂಜೂರು ಮಾಡಿಸುತ್ತೇನೆ" ಎಂದು ನಂಬಿಸಿ ಸಾರ್ವಜನಿಕರನ್ನು, ಅಸಹಾಯಕ ಮಹಿಳೆಯರನ್ನು ಹಾಗೂ ಹೊಟ್ಟೆಪಾಡಿಗಾಗಿ ದಿನವಿಡೀ ಕಷ್ಟಪಡುವ ಕೂಲಿಕಾರ್ಮಿಕರನ್ನು ವ್ಯವಸ್ಥಿತವಾಗಿ ಸುಲಿಗೆ ಮಾಡಿದ ಮಹಾ ಘೋರ ವಂಚನೆ ಪ್ರಕರಣವೊಂದು ಜಿಲ್ಲೆಯಲ್ಲಿ ಬಯಲಿಗೆ ಬಂದಿದೆ. 

ಗಂಗಿಮಡಿ ಬಡಾವಣೆಯ ನಿವಾಸಿ ಪ್ರೇಮಾ ಗುಡಿ ಹಾಗೂ ಆಕೆಯ ಗ್ಯಾಂಗ್ ನಡೆಸಿರುವ ಈ ವಂಚನೆಯ ಆಳ ಅಷ್ಟಿಷ್ಟಲ್ಲ. ಇದು ಕೇವಲ ಒಬ್ಬಿಬ್ಬರಿಗೆ ಮಾಡಿದ ಮೋಸವಲ್ಲ; ನೂರಾರು ಬಡ ಕುಟುಂಬಗಳ ಕನಸುಗಳನ್ನು ಮಣ್ಣುಪಾಲು ಮಾಡಿದ ವ್ಯವಸ್ಥಿತ ಅಪರಾಧ ಜಾಲ.

ವಂಚಕಿ ಪ್ರೇಮಾ ಗುಡಿ ಅಂಡ್ ಗ್ಯಾಂಗ್‌ನ ಹಿನ್ನೆಲೆ ಮತ್ತು ಕಾರ್ಯಾಚರಣೆಯ ಶೈಲಿ:


ಉದ್ಯೋಗ ಎಂಬುದು ಇಂದಿನ ಕಾಲದಲ್ಲಿ ಅತ್ಯಂತ ದೊಡ್ಡ ಅಗತ್ಯ. ಸರ್ಕಾರಿ ಉದ್ಯೋಗ ಸಿಗಲಿ ಎಂಬ ಕನಸು ಅನೇಕ ಕುಟುಂಬಗಳಲ್ಲಿ ವರ್ಷಗಳಿಂದ ಜೀವಂತವಾಗಿದೆ. ಇದೇ ಕನಸನ್ನು  ಅನೇಕ ಬಡವರಿಗೆ ಪ್ರೇಮಾ ಗುಡಿ ಅಂಡ್ ಗ್ಯಾಂಗ್ ಉದ್ಯೋಗ ಕೊಡಿಸುತ್ತೇನೆ, ಅಧಿಕಾರಿಗಳ ಪರಿಚಯ ಇದೆ, ಸಚಿವರನ್ನು ಬಲ್ಲೆ, ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಡುತ್ತೇನೆ ಎಂಬ ಭರವಸೆಗಳ ಮೂಲಕ ಹಣ ಸಂಗ್ರಹಿಸ, ಮೊಸ ಮಾಡಿದ್ದಾರೆನ್ನಲಾಗಿದೆ.
ಒಬ್ಬ ವ್ಯಕ್ತಿ ಹಣ ಕಳೆದುಕೊಳ್ಳುವುದು ಕೇವಲ ಆರ್ಥಿಕ ನಷ್ಟವಲ್ಲ. ಅದು ಒಂದು ಕುಟುಂಬದ ಕನಸು ಕುಸಿಯುವ ನೋವು. ವಿಶೇಷವಾಗಿ ಬಡ ಕುಟುಂಬಗಳು ಸಾಲ ಮಾಡಿ ನೀಡಿದ ಹಣ ಕಳೆದುಕೊಂಡರೆ ಅದರ ಪರಿಣಾಮ ಪೀಳಿಗೆಗಳವರೆಗೆ ಮುಂದುವರಿಯಬಹುದು.

​ಪ್ರೇಮಾ ಗುಡಿ ಕೇವಲ ಬಾಯಿ ಮಾತಿನಿಂದಷ್ಟೇ ಮೋಸ ಮಾಡುತ್ತಿರಲಿಲ್ಲ. ಆಕೆಯ ವಂಚನೆಯ ಜಾಲ ಅತ್ಯಂತ ನುರಿತ ಅಪರಾಧಿಗಳ ಶೈಲಿಯಲ್ಲಿರುತ್ತಿತ್ತು. ತನ್ನ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳಿದ್ದಾರೆ, ಸರ್ಕಾರದ ಉನ್ನತ ಅಧಿಕಾರಿಗಳು ನನ್ನ ಜೇಬಿನಲ್ಲಿದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಳು. ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಜನರಲ್ಲಿ ವಿಶ್ವಾಸ ಮೂಡಿಸುತ್ತಿದ್ದಳು.
 ನಂಬಿಕೆ ಹುಟ್ಟಿಸಲು ನಕಲಿ ಗುರುತಿನ ಚೀಟಿ ಹಾಗೂ ಸರ್ಕಾರದ ನಕಲಿ ಆದೇಶ ಪತ್ರಗಳನ್ನು ಸೃಷ್ಟಿಸುತ್ತಿದ್ದಳು. ಇನ್ನು ಈಕೆಗೆ ಸಾಥ್ ನೀಡಲು ಸಹೋದರ ಪರಶುರಾಮ ಕುರಿ (ಕುರಬರ), ಅಶ್ವಿನಿ ಕುರಬರ ಹಾಗೂ ಬಸವರಾಜ ಪೂಜಾರ, ಗಣಪತಿ ಹೆಗಡೆ ಎಂಬುವವರ ದೊಡ್ಡ ದಂಡೇ ಇತ್ತು. ಇವರೆಲ್ಲರೂ ಸೇರಿ ಬಣ್ಣ ಬಣ್ಣದ ಮಾತುಗಳನ್ನಾಡಿ ಬಡವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.

ಕೂಲಿಕಾರರ ಕಣ್ಣೀರು: ಬೆಟಗೇರಿ ಮತ್ತು ಅಸುಂಡಿ ಗ್ರಾಮದ ಮಹಿಳೆಯರ ಆಕ್ರಂದನ:



​ಈ ವಂಚನಾ ಜಾಲಕ್ಕೆ ಬಲಿಯಾದವರಲ್ಲಿ ಬಹುತೇಕರು ಗ್ರಾಮೀಣ ಭಾಗದ ಮುಗ್ಧ ಮಹಿಳೆಯರು ಮತ್ತು ಕೂಲಿಕಾರ್ಮಿಕರು. ಬೆಟಗೇರಿಯ ಗಲ್ಲಿ ಗಲ್ಲಿಗಳಲ್ಲಿ ಹಾಗೂ ಅಸುಂಡಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ಪ್ರೇಮಾ ಗುಡಿಯ ಮಕ್ಮಲ್ ಟೋಪಿಗೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಹೆಣ್ಣುಮಕ್ಕಳ ಮದುವೆಗಾಗಿ ಹನಿ ಹನಿಯಾಗಿ ಕೂಡಿಟ್ಟಿದ್ದ ಹಣ, ಸಾಲಸೋಲ ಮಾಡಿ ತಂದಿದ್ದ ನಗದು, ಒಡವೆಗಳನ್ನು ಅಡವಿಟ್ಟು ತಲಾ 2 ರಿಂದ 5 ಲಕ್ಷ ರೂಪಾಯಿಗಳವರೆಗೆ ತಂದು ಈ ವಂಚಕಿಯ ಕೈಗಿಟ್ಟಿದ್ದಾರೆ. ಇಂದು ಕೈಯಲ್ಲಿ ಕೆಲಸವೂ ಇಲ್ಲ, ಕೊಟ್ಟ ಹಣವೂ ಮರಳಿ ಬಾರದೆ, ಸಾಲಗಾರರ ಕಾಟ ತಾಳಲಾರದೆ ಈ ಹೆಣ್ಣುಮಕ್ಕಳು ಬೀದಿಪಾಲಾಗಿದ್ದಾರೆ. ಅಸುಂಡಿ, ಹುಲಕೋಟಿ, ಬೆಟಗೇರಿ ಮಾತ್ರವಲ್ಲದೆ ಬಳ್ಳಾರಿ, ಹೊಸಪೇಟೆ ಸೇರಿದಂತೆ ರಾಜ್ಯಾದ್ಯಂತ ಈ ಜಾಲ ಹರಡಿಕೊಂಡಿರುವುದು ದುರಂತ.


ಖಾಸಗಿ ಶಾಲಾ ಶಿಕ್ಷಕಿಗೆ 13 ಲಕ್ಷ ರೂ. ವಂಚನೆ ಮತ್ತು ರಾತ್ರಿ ವೇಳೆಯ ಹಲ್ಲೆ:

​ಈ ಕಿರಾತಕಿ ಬಡವರನ್ನು ಮಾತ್ರವಲ್ಲದೆ ವಿದ್ಯಾವಂತರನ್ನೂ ಬಿಟ್ಟಿಲ್ಲ. ಗದಗ ನಗರದ ಟಿಪ್ಪು ಸರ್ಕಲ್ ನಿವಾಸಿಯಾದ, ಖಾಸಗಿ ಶಾಲಾ ಶಿಕ್ಷಕಿ ಹಾಗೂ ಇತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡ ಮಾಜಿ ಸೈನಿಕನ ಪತ್ನಿ ಮಮ್ತಾಜ್ ಬೇಗಂ ನದಾಫ್ ಅವರಿಗೆ ಬರೋಬ್ಬರಿ 13 ಲಕ್ಷ ರೂಪಾಯಿಗಳ ವಂಚನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಹಣ ಪೀಕಲಾಗಿದೆ. ಹಣ ಪಡೆದದ್ದಲ್ಲದೇ, ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಖಾಲಿ ಚೆಕ್‌ಗಳನ್ನು ಬಲವಂತವಾಗಿ ಪಡೆದುಕೊಳ್ಳಲಾಗಿದೆ. ನ್ಯಾಯ ಕೇಳಲು ಹೋದರೆ, "ನಿಮ್ಮ ಮೇಲೆಯೇ ಚೆಕ್ ಬೌನ್ಸ್ ಕೇಸ್ ಹಾಕುತ್ತೇವೆ" ಎಂದು ಧಮ್ಕಿ ಹಾಕಲಾಗಿದೆ. ಅಷ್ಟೇ ಅಲ್ಲದೇ, ರಾತ್ರೋರಾತ್ರಿ ಮಮ್ತಾಜ್ ಅವರ ಮನೆಗೆ ನುಗ್ಗಿ ದೈಹಿಕ ಹಲ್ಲೆ ನಡೆಸಿರುವ ಗಂಭೀರ ಆರೋಪವೂ ಈ ಗ್ಯಾಂಗ್ ಮೇಲಿದೆ.

ಹಣ ಪೀಕಲು ಬಲಿಪಶುಗಳ ಖರ್ಚಿನಲ್ಲೇ 'ಬೆಂಗಳೂರು-ಗೋವಾ-ಬಳ್ಳಾರಿ' ಐಷಾರಾಮಿ ಟೂರ್!:

​ಪ್ರೇಮಾ ಗುಡಿಯ ವಂಚನೆಯ ನಾಟಕ ಅತ್ಯಂತ ರೋಚಕ ಮತ್ತು ಕ್ರೂರವಾಗಿತ್ತು. ಸರ್ಕಾರಿ ಆರ್ಡರ್ ಕಾಪಿ ಕೊಡಿಸುತ್ತೇನೆ ಎಂದು ನಂಬಿಸಿ, ನೊಂದ ಸಂತ್ರಸ್ತರ ಹಣದಲ್ಲೇ ಬೆಂಗಳೂರು, ಗೋವಾ, ಬಳ್ಳಾರಿ ಮುಂತಾದ ಪ್ರವಾಸಿ ತಾಣಗಳಿಗೆ ಐಷಾರಾಮಿ ಪ್ರವಾಸ ಕೈಗೊಳ್ಳುತ್ತಿದ್ದಳು. ಮೋಸ ಹೋಗುತ್ತಿರುವ ಬಡವರ ದುಡ್ಡಿನಲ್ಲೇ ಚಿಕನ್, ಮಟನ್ ಭಕ್ಷ್ಯ ಭೋಜನಗಳನ್ನು ತರಿಸಿಕೊಂಡು ತಿನ್ನುವುದು, ಐಷಾರಾಮಿ ಹೋಟೆಲ್‌ ರೂಮ್‌ಗಳನ್ನು ಬುಕ್ ಮಾಡಿಸಿ ಮಜಾ ಮಾಡುವುದು ಈಕೆಯ ದಿನಚರಿಯಾಗಿತ್ತು. "ಇಂದು ಆರ್ಡರ್ ಸಿಗುತ್ತದೆ, ನಾಳೆ ಸಿಗುತ್ತದೆ" ಎಂದು ತಿಂಗಳುಗಟ್ಟಲೆ ಜನರನ್ನು ಅಲೆದಾಡಿಸಿ, ಕೊನೆಗೆ ವರ್ಷ ಕಳೆದರೂ ಯಾವುದೇ ಕೆಲಸ ಕೊಡಿಸದೇ ನಡುನೀರಿನಲ್ಲಿ ಕೈಬಿಡುತ್ತಿದ್ದಳು.

​ರಾಜಕೀಯ ಹಾಗೂ ಪೊಲೀಸ್ ಇಲಾಖೆಯ 'ಕರಿನೆರಳು': ವಂಚಕಿಗೆ ರಕ್ಷಣೆ ಎಲ್ಲಿದೆ?


​ಇಷ್ಟೊಂದು ದೊಡ್ಡ ಮಟ್ಟದ ವಂಚನೆ ಜಿಲ್ಲೆಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಪ್ರೇಮಾ ಗುಡಿ ಗ್ಯಾಂಗ್ ಯಾವುದೇ ಭಯವಿಲ್ಲದೆ ಗದಗ ನಗರದಲ್ಲಿ ಅಡ್ಡಾಡುತ್ತಿದೆ ಎಂದರೆ ಇದರ ಹಿಂದೆ ಯಾರ ಕೈವಾಡವಿದೆ? ಈ ನೌಟಂಕಿ ಪ್ರೇಮಾಳ ಹಿಂದೆ ಪ್ರಭಾವಿ ರಾಜಕಾರಣಿಗಳ ಮತ್ತು ಪೊಲೀಸ್ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳ ಕರಿನೆರಳು ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೆಲವು ಸರ್ಕಾರಿ ನೌಕರರೇ ಈಕೆಗೆ ಮಧ್ಯವರ್ತಿಗಳಾಗಿ ಸಾಥ್ ನೀಡುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ವ್ಯವಸ್ಥೆಯೇ ವಂಚಕರ ಪರವಾಗಿ ನಿಂತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ವಂಚನೆ ಜಾಲ: ಯಾರಿಂದ ಎಷ್ಟು ಹಣ ವಸೂಲಿ?:

ಸಂತ್ರಸ್ತೆ ಮಮ್ತಾಜ್ ಬೇಗಂ ಅವರು ಎಸ್‌ಪಿಗೆ ನೀಡಿರುವ ದೂರಿನ ಪ್ರಕಾರ, ಸರ್ಕಾರಿ ನೌಕರಿ, ಸಾಲ ಸೌಲಭ್ಯ ಹಾಗೂ ಹೈನುಗಾರಿಕೆ ಸಾಲದ ಆಮಿಷವೊಡ್ಡಿ ನಾಲ್ವರು ಸೇರಿ ₹16,74,970 ಹಣ ಪಡೆದಿರುವ ಆರೋಪ ಕೇಳಿಬಂದಿದೆ.
• ಪರಶುರಾಮ ಕುರಬರ – ₹3,04,680 (ಸರ್ಕಾರಿ ನೌಕರಿ ನೆಪ)
• ಅಶ್ವಿನಿ (ಪತ್ನಿ ಪರಶುರಾಮ) – ₹2,70,290 (ಉದ್ಯೋಗ ಹಾಗೂ ಸಾಲದ ಆಮಿಷ)
• ಬಸವರಾಜ ಪೂಜಾರ – ₹1,20,000 (ನೌಕರಿ ಕೊಡಿಸುವ ಭರವಸೆ)
• ಪ್ರೇಮಾ ಗುಡಿ – ₹9,80,000 (ಸರ್ಕಾರಿ ನೌಕರಿ ಹಾಗೂ ಹೈನುಗಾರಿಕೆ ಸಾಲ ನೆಪ)
ಒಟ್ಟು ಆರೋಪಿತ ವಂಚನೆ ಮೊತ್ತ: ₹16,74,970
ಈ ವಿವರಗಳು ಸಂತ್ರಸ್ತೆ ಸಲ್ಲಿಸಿರುವ ದೂರಿನಲ್ಲಿನ ಆರೋಪಗಳಾಗಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ. 

ಕೇವಲ ಒಬ್ಬರಿಂದ ಇಷ್ಟೊಂದು ಹಣದ ವಂಚನೆ ಮಾಡಿರುವಾಗ ೨೦೦ ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವ ಹಣ ನೂರಾರು ಕೋಟಿಗೂ ಅಧಿಕ ಎನ್ನಲಾಗಿದೆ.

ದೂರು ಸ್ವೀಕರಿಸಲು ಮೀನಾಮೇಷ: ಕಾನೂನು ಸುವ್ಯವಸ್ಥೆಯ ವೈಫಲ್ಯ:

​ಗದಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆಯೇ? ಸಂತ್ರಸ್ತ ಮಹಿಳೆಯರು ತಮಗೆ ನ್ಯಾಯ ಕೇಳಲು ಯಾವ ಪೊಲೀಸ್ ಠಾಣೆಗೆ ಹೋದರೂ ದೂರು ದಾಖಲಿಸಿಕೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ವಂಚನೆಗೆ ಒಳಗಾದ ಬಡ ಹೆಣ್ಣುಮಕ್ಕಳನ್ನು ಗದರಿಸಿ ವಾಪಸ್ ಕಳುಹಿಸುವ ಕೆಲಸವನ್ನು ಕೆಲವು ಠಾಣೆಗಳಲ್ಲಿ ಮಾಡಲಾಗುತ್ತಿದೆ. ವಂಚಕರಿಗೆ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಗದಗ ಜಿಲ್ಲೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ ಎಂಬ ಕಟು ಟೀಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ದೂರು ಕೊಡಲು ಹೋದವರಿಗೇ ಧಮ್ಕಿ ಹಾಕುವ ಮಟ್ಟಿಗೆ ಪ್ರೇಮಾ ಗುಡಿ ಗ್ಯಾಂಗ್‌ಗೆ ಧೈರ್ಯ ಬಂದಿದೆ ಎಂದರೆ ಕಾನೂನಿನ ಭಯ ಎಲ್ಲಿ ಉಳಿದಿದೆ?

​ಕಾನೂನು ಸಚಿವರ ಎದುರು ಕೈಮುಗಿದು ನಿಂತ ಸಂತ್ರಸ್ತರು: ಸರ್ಕಾರದ ಗಮನಕ್ಕೆ ತಂದ ಅರ್ಜಿ:

​ಪೊಲೀಸ್ ಠಾಣೆಗಳಲ್ಲಿ ನ್ಯಾಯ ಸಿಗದಿದ್ದಾಗ ಬೇಸತ್ತ ನೊಂದ ಮಹಿಳೆಯರು ಮತ್ತು ಸಾಲದ ಸುಳಿಗೆ ಸಿಲುಕಿದ ಬಡ ಕುಟುಂಬಗಳು ಕೊನೆಗೆ ಮಾನ್ಯ ಕಾನೂನು ಸಚಿವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಚಿವರ ಎದುರು ಕೈಮುಗಿದು, ಕಣ್ಣೀರಿಡುತ್ತಾ ತಮಗಾದ ಅನ್ಯಾಯವನ್ನು ವಿವರಿಸಿ, ಹಣ ವಾಪಸ್ ಕೊಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಇಷ್ಟೊಂದು ಸಾಲು ಸಾಲು ಮಾಧ್ಯಮ ವರದಿಗಳಾಗುತ್ತಿದ್ದರೂ, ಕಾನೂನು ಸಚಿವರ ಗಮನಕ್ಕೆ ಪ್ರಕರಣ ಬಂದಿದ್ದರೂ ಇಲಾಖೆ ಇನ್ನೂ ಮೌನ ವಹಿಸಿರುವುದು ಆಡಳಿತ ಯಾಂತ್ರಿಕತೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

​ದಕ್ಷ ಎಸ್.ಪಿ. ರೋಹನ ಜಗದೀಶ ಅವರಿಗೆ ಸಾರ್ವಜನಿಕರ ಕಳಕಳಿಯ ಸವಾಲು!:

​ಪ್ರಸ್ತುತ ಗದಗ ಜಿಲ್ಲೆಯು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ  ರೋಹನ ಜಗದೀಶ ಅವರ ನೇತೃತ್ವದಲ್ಲಿದೆ. ಸಾರ್ವಜನಿಕರು ಹಾಗೂ ನೊಂದ ಮಹಿಳೆಯರು ಎಸ್.ಪಿ. ಸಾಹೇಬರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಈ ಭ್ರಷ್ಟ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ದಕ್ಷ ಅಧಿಕಾರಿಗಳ ಕಠಿಣ ಕ್ರಮದ ಅಗತ್ಯವಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ನೂರಾರು ಬಡ ಕುಟುಂಬಗಳ ಹೊಟ್ಟೆ ಹೊಡೆದ ಪ್ರೇಮಾ ಗುಡಿ ಮತ್ತು ಆಕೆಯ ಗ್ಯಾಂಗ್ ಅನ್ನು ತಕ್ಷಣವೇ ಬಂಧಿಸಿ, ಸೂಕ್ತ ತನಿಖೆ ನಡೆಸಿ ಜೈಲಿಗಟ್ಟುತ್ತಾರಾ? ನೊಂದ ಮಹಿಳೆಯರ ಹಣವನ್ನು ಮರಳಿ ಕೊಡಿಸುವಲ್ಲಿ ಯಶಸ್ವಿಯಾಗುತ್ತಾರಾ? ಎಂಬುದನ್ನು ಗದಗ ಜಿಲ್ಲೆಯ ಜನತೆ ಕಾದು ನೋಡುತ್ತಿದ್ದಾರೆ.

​ ಜಾಗೃತಿ ಸಂದೇಶ: ಸಾರ್ವಜನಿಕರೇ, ಉದ್ಯೋಗ ವಂಚಕರ ಆಮಿಷಕ್ಕೆ ಬಲಿಯಾಗಬೇಡಿ!:

​ನೆನಪಿರಲಿ: ಯಾವುದೇ ಉದ್ಯೋಗ ನೀಡಲು ಸರ್ಕಾರಿ ಸಂಸ್ಥೆಗಳಾಗಲಿ ಅಥವಾ ಖಾಸಗಿ ಕಂಪನಿಗಳಾಗಲಿ ಮುಂಗಡವಾಗಿ ಲಕ್ಷಾಂತರ ರೂಪಾಯಿ ಹಣ, ಸೆಕ್ಯೂರಿಟಿ ಡಿಪಾಸಿಟ್ ಅಥವಾ ಲಂಚವನ್ನು ಕೇಳುವುದಿಲ್ಲ. ಇಂತಹ ಆಮಿಷ ಒಡ್ಡುವವರೇ ನಕಲಿ ವಂಚಕರು.
​ನಿಮಗೆ ಯಾರಾದರೂ ಇಂತಹ ನೌಕರಿಯ ಆಮಿಷ ತೋರಿಸಿ ಆನ್‌ಲೈನ್ ಅಥವಾ ನೇರವಾಗಿ ಹಣ ಪಡೆದರೆ ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:
• ​ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆ 1930 ಗೆ ತಕ್ಷಣ ಕರೆ ಮಾಡಿ ದೂರು ನೀಡಿ.
• ​ಕೇಂದ್ರ ಸರ್ಕಾರದ ಅಧಿಕೃತ ಸೈಬರ್ ಕ್ರೈಮ್ ಪೋರ್ಟಲ್ (cybercrime.gov.in) ನಲ್ಲಿ ಆನ್‌ಲೈನ್ ಹಣಕಾಸು ವಂಚನೆ ಅಡಿಯಲ್ಲಿ ದೂರು ದಾಖಲಿಸಿ.
• ​ಹಣ ವರ್ಗಾವಣೆ ಮಾಡಿದ ಬ್ಯಾಂಕ್ ರಸೀದಿಗಳು, ಚಾಟ್‌ಗಳು ಮತ್ತು ಫೋನ್ ಕರೆಗಳ ರೆಕಾರ್ಡ್‌ಗಳನ್ನು ಸಾಕ್ಷ್ಯವಾಗಿ ಜೋಪಾನವಾಗಿಡಿ.
• 
​ಗದಗವಾಣಿ ಕಳಕಳಿ: ಸತ್ಯ ಹೊರಬರಲಿ, ನ್ಯಾಯ ದೊರಕಲಿ:

​ಗದಗ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಬಡವರ, ಕೂಲಿಕಾರ್ಮಿಕರ ರಕ್ತ ಹೀರುವ ಇಂತಹ ಕಿರಾತಕ ವಂಚಕರಿಗೆ ಸಮಾಜದಲ್ಲಿ ಮತ್ತು ಕಾನೂನಿನಡಿಯಲ್ಲಿ ಯಾವುದೇ ರಕ್ಷಣೆ ಸಿಗಬಾರದು. ಗದಗ ಗ್ರಾಮೀಣ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳ್ಳಬೇಕಿದೆ. ರಾಜಕೀಯ ಒತ್ತಡಗಳಿಗೆ ಮಣಿಯದೆ ಇಲಾಖೆ ಕಾರ್ಯನಿರ್ವಹಿಸಬೇಕಿದೆ. ನೊಂದ ಪ್ರತಿಯೊಬ್ಬ ಹೆಣ್ಣುಮಗಳಿಗೆ ನ್ಯಾಯ ಸಿಗುವವರೆಗೆ, ಅವರ ಕಣ್ಣೀರು ವಾಲುವವರೆಗೆ ಮತ್ತು ವಂಚಕರು ಜೈಲು ಕಂಬಿ ಎಣಿಸುವವರೆಗೂ 'ಗದಗವಾಣಿ' ಪತ್ರಿಕೆ ನೊಂದವರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತದೆ ಮತ್ತು ಈ ಜಾಲದ ಪ್ರತಿ ಹಂತದ ಸತ್ಯವನ್ನು ಸಮಾಜದ ಮುಂದೆ ತೆರೆದಿಡುತ್ತದೆ.
**

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...