ಶಾಸಕ ಜಿ.ಎಸ್. ಪಾಟೀಲರಿಗೆ ‘ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ
ಗದಗವಾಣಿ ಸುದ್ದಿಮೂಲ
ನರೇಗಲ್ಲ, ಮೇ ೧೪:
ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ಶಾಸಕ ಜಿ.ಎಸ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ೧೧೯ನೇ ಜಯಂತ್ಯೋತ್ಸವವನ್ನು ಮೇ ೧೬ರಂದು ಸಂಜೆ ೪ ಗಂಟೆಗೆ ನರೇಗಲ್ಲ ಪಟ್ಟಣದ ಅಂಬೇಡ್ಕರ್ ಸರ್ಕಲ್ ಸಮೀಪದ ಹಳೇ ಬಸ್ ನಿಲ್ದಾಣದ ತೊಂಡಿಹಾಳ ರಸ್ತೆಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಕುರಿತು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರೋಣ ಶಾಸಕ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ “ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಲಾಗುತ್ತಿದೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪನೆ, ವಿವಿಧ ಕಂಪನಿಗಳ ಸಂಪರ್ಕದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಹಾಗೂ ಸಮಾಜದ ತಳಮಟ್ಟದ ಜನರ ಅಭ್ಯುದಯಕ್ಕಾಗಿ ಶ್ರಮಿಸಿರುವ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಕಲ್ಲಯ್ಯಜ್ಜನವರು, ನರೇಗಲ್ಲ ಹಿರೇಮಠದ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ರೋಣ ಬೂದೀಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು, ನರೇಗಲ್ಲ ರಹಿಮಾನ್ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು ಹಾಗೂ ಸೂಡಿಯ ಮರುಳು ಸಿದ್ದೇಶ್ವರ ಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಲಿದ್ದು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಉದ್ಘಾಟಿಸಲಿದ್ದಾರೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಡಾ. ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಯುವ ಮುಖಂಡರಾದ ಮಿಥುನ್ ಜಿ. ಪಾಟೀಲ ಹಾಗೂ ಕೃಷ್ಣೇಗೌಡ ಎಚ್. ಪಾಟೀಲ ಅವರು ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಐ. ಪಾಟೀಲ ಸಂವಿಧಾನ ಪೀಠಿಕೆ ವಾಚನ ಮಾಡಲಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಬಿಎಂಟಿಸಿ ರಾಜ್ಯ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಅವರು ಡಾ. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟು ಗಣ್ಯರಿಗೆ ವಿಶೇಷ ಸನ್ಮಾನ, ಸರ್ಕಾರಿ ಸೇವೆಯಲ್ಲಿ ತೊಡಗಿರುವ ಮಾದಿಗ ಸಮುದಾಯದ ಗಣ್ಯರ ಗೌರವ ಸಮರ್ಪಣೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಹಿರಿಯ ಕುಸ್ತಿ ಪಟು, ನಾಟಿ ವೈದ್ಯ ಬೈಲಪ್ಪ ತಳವಾರ, ನಿರಂತರ ಜಲಸೇವೆಯ ಈಶಯ್ಯ ಕಲ್ಲೂರ, ವಿಪತ್ತು ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಹಾಗೂ ಗೃಹರಕ್ಷಕ ದಳದ ಕಮಾಂಡರ್ ಸುರೇಶ್ ಹಳ್ಳಿಕೇರಿ, ಪರಿಸರ ಜಾಗೃತಿಗಾಗಿ ಗ್ರೀನ್ ಆರ್ಮಿ ಸ್ಥಾಪಿಸಿದ ಪತ್ರಕರ್ತ ಚಂದ್ರು ಎಂ. ರಾಥೋಡ್, ಕ್ರೀಡಾ ಕ್ಷೇತ್ರದಲ್ಲಿ ಅನೇಕ ಪ್ರತಿಭೆಗಳನ್ನು ಬೆಳೆಸಿದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ. ಗೌಡರ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಶಿಕ್ಷಕ ಮತ್ತು ಪತ್ರಕರ್ತ ಅರುಣ ಬಿ. ಕುಲಕರ್ಣಿ, ಸ್ವಚ್ಛತಾ ಸೇವೆಯಲ್ಲಿ ಮಾದರಿಯಾದ ನಿವೃತ್ತ ಪೌರಕಾರ್ಮಿಕ ಹನಮಪ್ಪ ಅಂಗೇರಿ ಹಾಗೂ ಉಚಿತ ಯೋಗ ಮತ್ತು ಈಜು ತರಬೇತಿ ನೀಡುತ್ತಿರುವ ಶಿಕ್ಷಕ ವಿ.ಎ. ಕುಂಬಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪುನೀತ್ ಮೆಲೋಡೀಸ್ ಪಲ್ಲವಿ ಗಾನ ಭಜನಾ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜಾನಪದ ಕಲಾವಿದರಾದ ಪರಸು ಕೇಲೂರ, ಮ್ಯೂಸಿಕ್ ಮೈಲಾರಿ ಹಾಗೂ ಗಿಡಗಿಣಿ ಖ್ಯಾತಿಯ ತೃಪ್ತಿ ಧಾರವಾಡ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ದಲಿತಪರ ಸಂಘಟನೆಗಳ ಮುಖಂಡರು, ಅಧಿಕಾರಿಗಳು, ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
ಫೋಟೋ ಶೀರ್ಷಿಕೆಗಳು:
ಮೇ.೧೪- ನರೇಗಲ್ಲ-೧: ಡಾ. ಬಿ.ಆರ್. ಅಂಬೇಡ್ಕರ್
ಮೇ. ೧೪-ನರೇಗಲ್ಲ-೧ಎ: ಡಾ. ಬಾಬು ಜಗಜೀವನ್ ರಾಮ್
Post a Comment