⚡ಟ್ರೆಂಡಿಂಗ್ಸ್

ನಂದಿಪುರದಲ್ಲಿ ‘ನಂದಿಪುರದ ನಂದಾದೀಪ’ ಚಿತ್ರಕ್ಕೆ ಮುಹೂರ್ತ

ನಂದಿಪುರದಲ್ಲಿ ‘ನಂದಿಪುರದ ನಂದಾದೀಪ’ ಚಿತ್ರಕ್ಕೆ ಮುಹೂರ್ತ

ಚರಂತಪ್ಪಜ್ಜನವರ ಜೀವನಾಧಾರಿತ ಭಕ್ತಿಪ್ರಧಾನ ಸಿನೆಮಾ ಶುಭಾರಂಭ

ಹಗರಿಬೊಮ್ಮನಹಳ್ಳಿ, ಏ.20: ತಾಲೂಕಿನ ಪವಿತ್ರ ಕ್ಷೇತ್ರ ನಂದಿಪುರದಲ್ಲಿ ‘ನಂದಿಪುರದ ನಂದಾದೀಪ’ ಎಂಬ ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಕೃಷಿ, ಧಾರ್ಮಿಕ ಸೇವೆ ಹಾಗೂ ವಾಕ್‌ಸಿದ್ಧಿಯ ಮೂಲಕ ಖ್ಯಾತಿ ಪಡೆದ ಚರಂತಪ್ಪಜ್ಜನವರ ಜೀವನ ಚರಿತ್ರೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ.

ನಂದಿಪುರ ಮಠದ ಪರಮಪೂಜ್ಯ ಡಾ. ಮಹೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, “ಚರಂತಪ್ಪಜ್ಜನವರ ಲೀಲೆಗಳು ಸಂಕಷ್ಟದಲ್ಲಿರುವ ಭಕ್ತರಿಗೆ ದಾರಿದೀಪವಾಗಿವೆ. ಅವರ ಬದುಕು ಭಾವೈಕ್ಯತೆ ಹಾಗೂ ಧಾರ್ಮಿಕ ಮೌಲ್ಯಗಳಿಗೆ ಪ್ರತೀಕವಾಗಿದೆ. ಈ ರೀತಿಯ ಜೀವನಗಾಥೆ ಚಿತ್ರರೂಪ ಪಡೆಯುವುದು ಸಂತೋಷಕರ” ಎಂದು ಹೇಳಿದರು.

ಮುಹೂರ್ತದ ಅಂಗವಾಗಿ ಶ್ರೀ ಗುರುದೊಡ್ಡ ಬಸವೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತಂಗಿಯ ಸೋಮಶಂಕರ ಮಹಾಸ್ವಾಮಿಗಳು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಮುಷ್ಟೂರಿನ ಪೂಜ್ಯರು ಕ್ಯಾಮೆರಾ ಚಾಲನೆ ನೀಡಿದರು. ಬಿದರಕೆರೆಯ ಶಿವಜ್ಜ ತಾತ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಭೂ ಸಂವೃದ್ಧಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಗಿರಿಜಾ ಎ. ವಿಷ್ಣು ಪೂಜಾ ಆರಾಧ್ಯ ಅವರು ಚಿತ್ರ ನಿರ್ಮಿಸುತ್ತಿದ್ದು, ಆದಿತ್ಯ ಚಿಕ್ಕಣ್ಣ ನಿರ್ದೇಶನ ಹಾಗೂ ಕಥೆ-ಚಿತ್ರಕಥೆ ಹೊಣೆ ಹೊತ್ತಿದ್ದಾರೆ. ಹಿರಿಯ ಸಾಹಿತಿ ಎಸ್.ವಿ. ಪಾಟೀಲ ಗುಂಡೂರು ಅವರ ‘ನಡೆದಾಡುವ ದೇವರು’ ಕೃತಿಯನ್ನು ಆಧರಿಸಿ ಚಿತ್ರ ರೂಪುಗೊಳ್ಳುತ್ತಿದೆ.

ಚಿತ್ರಕ್ಕೆ ಆರ್. ಗಿರಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಹಾಗೂ ದೇವೇಂದ್ರಕುಮಾರ ಪತ್ತಾರ ಸಂಗೀತ ನೀಡಿದ್ದಾರೆ. ಚರಂತಪ್ಪಜ್ಜನವರ ಕಾರ್ಯಕ್ಷೇತ್ರಗಳಲ್ಲೇ ಚಿತ್ರೀಕರಣ ನಡೆಯಲಿದ್ದು, ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವುದಾಗಿ ಚಿತ್ರತಂಡ ತಿಳಿಸಿದೆ.

ಈ ಸಂದರ್ಭದಲ್ಲಿ ಡಾ. ಜಂಬಣ್ಣ ಹಡಗಲಿ, ಎನ್. ವೆಂಕಣ್ಣ, ಬಿ.ಎನ್. ಹೊರಪೇಟಿ, ಗರಡಿ ವೀರಣ್ಣ, ವೀರಭದ್ರಪ್ಪ ಕಂಪ್ಲಿ, ಬ್ಯಾಡಗಿ ಬಸಣ್ಣ, ಡಾ. ಹನುಮಂತಪ್ಪ, ಯಮನೂರಪ್ಪ, ಮರೇಗೌಡ, ಶೇಖರಯ್ಯ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...