ಖಾಸಗಿ ಕಂಪನಿಯ ನಿರ್ಲಕ್ಷ್ಯಕ್ಕೆ ಖಂಡನೆ: ಗಾಯಗೊಂಡ ಕಾರ್ಮಿಕನಿಗೆ ನ್ಯಾಯಕ್ಕಾಗಿ ಹೋರಾಟ ತೀವ್ರ
ಗದಗವಾಣಿ ಸುದ್ದಿಮೂಲ | ನರೇಗಲ್
ಖಾಸಗಿ ವಿದ್ಯುತ್ ಘಟಕದಲ್ಲಿ ಸಂಭವಿಸಿದ ಗಂಭೀರ ಅಪಘಾತದ ಹಿನ್ನೆಲೆಯಲ್ಲಿ, ಗಾಯಗೊಂಡ ಉದ್ಯೋಗಿಗೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ದಲಿತಪರ ಮತ್ತು ರೈತಪರ ಸಂಘಟನೆಗಳು ಶನಿವಾರ ತೀವ್ರ ಪ್ರತಿಭಟನೆ ನಡೆಸಿದವು.
ನರೇಗಲ್ ಸಮೀಪದ ಬೂದಿಹಾಳ ಗ್ರಾಮದ ಹೊರವಲಯದಲ್ಲಿರುವ ಪವನ್ ವಿದ್ಯುತ್ ಘಟಕದ ಎದುರು ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರೋಣ ತಾಲ್ಲೂಕು ಮುಖಂಡ ಮಂಜುನಾಥ ಚಲವಾದಿ, ಪವರ್‌ಕಾನ್ ಖಾಸಗಿ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿದ್ದ ಗುರುಲಿಂಗಯ್ಯ ಅಡವಯ್ಯ ಮಠಪತಿ ಅವರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಕ್ರೇನ್ ಹಾಗೂ ಟೇಲಿಂಡರ್ ವಾಹನಗಳ ಅಸಾವಧಾನದಿಂದ ಕಬ್ಬಿಣದ ಕಂಬಗಳು ಅವರ ಮೇಲೆ ಬಿದ್ದು, ಬೆನ್ನುಮೂಳೆ ಹಾಗೂ ದೇಹದ ಹಲವು ಭಾಗಗಳು ಗಂಭೀರವಾಗಿ ಗಾಯಗೊಂಡಿವೆ ಎಂದು ವಿವರಿಸಿದರು.
2025ರ ಸೆಪ್ಟೆಂಬರ್ 29ರಂದು ಸಂಭವಿಸಿದ ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗುರುಲಿಂಗಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ ಪ್ರಕರಣವನ್ನು ಎಂಎಲ್‌ಸಿ ಆಗಿ ದಾಖಲಿಸದೆ, ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಅವಕಾಶ ನೀಡದೆ ಕಂಪನಿ ನಿರ್ಲಕ್ಷ್ಯ ತೋರಿದೆ ಎಂದು ಅವರು ಆರೋಪಿಸಿದರು.
“ಬಡ ರೈತ ಕುಟುಂಬಕ್ಕೆ ಸೇರಿದ ಈ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಗ, ಕಂಪನಿಯವರು ಪರಿಹಾರ ಮತ್ತು ಉದ್ಯೋಗ ಭರವಸೆ ನೀಡಿದರೂ, ನಂತರ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಈಗ ನ್ಯಾಯ ಕೇಳಲು ಹೋದಾಗ ಬೆದರಿಕೆ ಹಾಕಲಾಗುತ್ತಿದೆ” ಎಂದು ಮಂಜುನಾಥ ಚಲವಾದಿ ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಪಿ. ಮುಳಗುಂದ ಮಾತನಾಡಿ, “ಸ್ಥಳೀಯರ ಭೂಮಿಯನ್ನು ಪಡೆದುಕೊಂಡು ಕಂಪನಿಗಳು ಲಾಭ ಪಡೆಯುತ್ತಿವೆ. ಆದರೆ ಅದೇ ಪ್ರದೇಶದ ಜನರೊಂದಿಗೆ ಅನ್ಯಾಯ ಮಾಡುವುದು ಅತ್ಯಂತ ವಿಷಾದನೀಯ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ” ಎಂದು ಟೀಕಿಸಿದರು.
ಅವರು ಮುಂದುವರೆದು, “ಈಗ ಕೆಲಸಕ್ಕೆ ಅಸಮರ್ಥನಾದ ಗುರುಲಿಂಗಯ್ಯಗೆ ಜೀವನಪೂರ್ತಿ ವೇತನ, ಸಂಪೂರ್ಣ ವೈದ್ಯಕೀಯ ವೆಚ್ಚ ಹಾಗೂ ಇತರೆ ಸೌಲಭ್ಯಗಳನ್ನು ನೀಡುವವರೆಗೆ ಹೋರಾಟ ನಿಲ್ಲದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಗಾಯಗೊಂಡ ಕಾರ್ಮಿಕನ ಬದುಕಿನ ಹಕ್ಕಿಗಾಗಿ ಎದ್ದಿರುವ ಈ ಹೋರಾಟ, ಕಾರ್ಮಿಕರ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
Post a Comment