ಗದಗ, ಏ.24: ಬಾದಾಮಿಯ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ವತಿಯಿಂದ ಗುರುಶ್ರೀ ಮೋನಪ್ಪ ಧರ್ಮಪ್ಪ ಮನೋಚಾರ್ಯ ಗುರುಗಳ 102ನೇ ಜಯಂತ್ಯೋತ್ಸವದ ಅಂಗವಾಗಿ 19ನೇ ಗುರುಸ್ಮರಣೆ ಕಾರ್ಯಕ್ರಮ ಶುಕ್ರವಾರ ಗದಗ ನಗರದ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗದಗ ನಗರದ ಐದು ಪ್ರತಿಷ್ಠಿತ ಬಿ.ಎಡ್. ಕಾಲೇಜುಗಳಿಂದ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗಾಗಿ ಅಂತರ-ಕಾಲೇಜು ಮಟ್ಟದ “ಪ್ರತಿಭಾ ಕಾರಂಜಿ” ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲಾ, ಆಶುಭಾಷಣ ಹಾಗೂ ಜಾನಪದ ಗಾಯನ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯುವ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಹಿರಿಯರು ಹಾಗೂ ನಿವೃತ್ತ ಪ್ರಾಚಾರ್ಯರಾದ ಪ್ರೊ. ಎ. ರಾಮಚಂದ್ರಪ್ಪ ಉದ್ಘಾಟಿಸಿದರು. ಸಿರಿಗಂಧ ಬಳಗದ ಅಧ್ಯಕ್ಷರಾದ ದಾಜೀಬಾ ಜಗದಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಮಾರ್ಗದರ್ಶಕರಾದ ಅಶೋಕ ನಾಗಠಾಣ ಹಾಗೂ ಪ್ರತಿಷ್ಠಾನದ ಮುಖ್ಯಸ್ಥ ಆಕಾಶ್ ಡಿ. ಮನೋಚಾರ್ಯ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡದ ನಿವೃತ್ತ ಶಿಕ್ಷಕ ಸುರೇಶ್ ಕುಲಕರ್ಣಿ ಅವರು “ಪರಿಣಾಮಕಾರಿ ಬೋಧನೆ” ವಿಷಯದ ಕುರಿತು ಹಾಗೂ ಶೃಂಗೇರಿಯ ಡಾ. ಪ್ರವೀಣ್ ಅಂಗಡಿ ಅವರು “ಯುವ ಸ್ವಾಸ್ಥ್ಯ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾದಾನ ಸಮಿತಿಯ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪರಂಪರೆಯ ಭಾಗವಾದ ಅಭಿನಂದನಾ ಸಮಾರಂಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ *ಗುರುಶ್ರೀ ಸನ್ಮಾನ* ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ರವೀಂದ್ರ ಮೂಲಿಮನಿ ಹಾಗೂ ಕೊಪ್ಪಳ ಜಿಲ್ಲೆಯ ಬೀರಪ್ಪ ಅಂಡಗಿ ಚಿಲವಾಡಗಿ ಅವರನ್ನು ಸನ್ಮಾನಿಸಲಾಯಿತು.
ಸಮಾಜಮುಖಿ ಚಿಂತನೆಗಳೊಂದಿಗೆ ಎಲೆಮರೆಯ ಕಾಯಿಯಂತೆ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಸಾಧಕರಿಗೆ *ವಿಶಿಷ್ಟ ಸೇವಾ ಸನ್ಮಾನ* ನೀಡಿ ಗೌರವಿಸಲಾಯಿತು. ಕೊಪ್ಪಳ ಜಿಲ್ಲೆಯ ಹುಚ್ಚಮ್ಮ ಬಸಪ್ಪ ಚೌಧರಿ, ದಕ್ಷಿಣ ಕನ್ನಡ ಜಿಲ್ಲೆಯ ಕೆ. ನಾರಾಯಣ ನಾಯಕ, ಚಿತ್ರದುರ್ಗ ಜಿಲ್ಲೆಯ ಗೊಳಪ್ಪ ತಳವಾರ, ಹಾವೇರಿ ಜಿಲ್ಲೆಯ ಕನ್ನಪ್ಪ ಛತ್ರದ ಹಾಗೂ ಬೆಳಗಾವಿ ಜಿಲ್ಲೆಯ ಗೋಪೇಶ್ವರ ದಾಸ ಅವರನ್ನು ಗೌರವಿಸಲಾಯಿತು.
ಪಾರಂಪರಿಕ ಹಸ್ತ ಕಲೆ, ಲೋಹ ಶಿಲ್ಪಕಲೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ *ವಿಶಿಷ್ಟ ಕಲಾ ಸನ್ಮಾನ* ನೀಡಿ ಸನ್ಮಾನಿಸಲಾಯಿತು. ಬಾಗಲಕೋಟೆಯ ನಾಗಲಿಂಗಪ್ಪ ಗಂಗೂರ ಹಾಗೂ ರಾಯಚೂರು ಜಿಲ್ಲೆಯ ರಹಿಮಾನಸಾಬ ನದಾಫ್ ಅವರಿಗೆ ಈ ಗೌರವ ಲಭಿಸಿತು.
*ಪ್ರತಿಭಾ ಕಾರಂಜಿ* ಕಾರ್ಯಕ್ರಮದಡಿ ನಡೆದ ಆರು ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಿ ನಿರ್ವಹಿಸಿದ ಹನ್ನೆರಡು ಶಿಕ್ಷಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು, ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ *ಮಾತೋಶ್ರೀ ಪ್ರತಿಭಾ ಪುರಸ್ಕಾರ* ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ತಜ್ಞ ಶ್ರೀ ಸುರೇಶ್ ಕುಲಕರ್ಣಿ, “ಶಿಕ್ಷಕರು ವಿಷಯದ ಆಳಕ್ಕೆ ಇಳಿದು ಭಾವನಾತ್ಮಕವಾಗಿ ಬೋಧಿಸಿದಾಗ ಮಾತ್ರ ಮಕ್ಕಳ ಮನಸ್ಸಿಗೆ ತಲುಪಲು ಸಾಧ್ಯ. ನಿರಂತರ ಓದು ಮತ್ತು ಜ್ಞಾನಾರ್ಜನೆ ಶಿಕ್ಷಕರ ವ್ಯಕ್ತಿತ್ವವನ್ನು ಬಲಪಡಿಸುತ್ತದೆ” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಮುಖ್ಯಸ್ಥ ಆಕಾಶ್ ಡಿ. ಮನೋಚಾರ್ಯ, ಅಭಿನಂದನಾ ಕಾರ್ಯಕ್ರಮದ ಅಡಿಯಲ್ಲಿ ಗುರುಶ್ರೀ ಸನ್ಮಾನ, ವಿಶಿಷ್ಟ ಸೇವಾ ಸನ್ಮಾನ ಹಾಗೂ ವಿಶಿಷ್ಟಕಲಾ ಸನ್ಮಾನ ಸ್ವೀಕರಿಸಿದ ಶಿಕ್ಷಕರ, ಸಮಾಜ ಸೇವಕರ ಹಾಗೂ ಕಲಾವಿದರ ಅಪಾರ ಶ್ರಮ, ಗಣನಿಯ ಸೇವೆ, ಸಮಾಜದ ಬಗ್ಗೆ ಅವರಿಗಿರುವ ಕಳಕಳಿ ಹಾಗೂ ಅವರ ಸಾಧನೆಯು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಪ್ರೇರಣೆಯ ದೀಪಸ್ತಂಭವಾಗಿ, ಸ್ಫೂರ್ತಿಯ ಸೆಲೆಯಾದರೆ ಪ್ರತಿಷ್ಠಾನದ ಪ್ರಯತ್ನಕ್ಕೆ ಸಾರ್ಥಕತೆ ಸಿಕಂತಾಗುತ್ತದೆ ಎಂದು ಪ್ರತಿಷ್ಠಾನ ಆಶಿಸುತ್ತದೆ. ಗುರುಸ್ಮರಣೆ ಕಾರ್ಯಕ್ರಮದ ವೇದಿಕೆ ಮೂಲಕ ಮೌಲ್ಯಾದಾರಿತ ಸೇವಾ ಭಾವ, ಸಾಮಾಜಿಕ ಹೊಣೆಗಾರಿಕೆ ಮತ್ತು ಸೃಜನಾತ್ಮಕ ಚಿಂತನೆಗಳನ್ನು ಯುವ ಪೀಳಿಗೆಯ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರುವಂತೆ ಮಾಡುವ ಸಂಕಲ್ಪವನ್ನು ಪ್ರತಿಷ್ಠಾನ ಹೊಂದಿದೆ. ಸಮಾಜಕ್ಕೆ ದಾರಿದೀಪವಾಗುವಂತಹ ಆದರ್ಶ ವ್ಯಕ್ತಿತ್ವಗಳನ್ನು ಸಮಾಜಕ್ಕೆ ಪರಿಚಯಿಸುವ ಪ್ರತಿಷ್ಠಾನದ ಈ ಪ್ರಯತ್ನವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ತಿಳಿಸಿದರು.
Post a Comment