ಗದಗದ ಜಿಲ್ಲಾಡಳಿತ ಭವನದ ಕಂಪ್ಯೂಟರ್, ಸಿಪಿಯು ಜಪ್ತಿ: ₹18 ಲಕ್ಷ ಬಿಲ್ ನೀಡದ್ದಕ್ಕೆ ಕೋರ್ಟ್ ಬಿಗ್ ಶಾಕ್!
ಗದಗವಾಣಿ ಸುದ್ದಿಮೂಲ
ಗದಗ:
ಕಾಲಕ್ಕೆ ಸರಿಯಾಗಿ ಗುತ್ತಿಗೆದಾರರ ಬಿಲ್ ಪಾವತಿಸದ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ದಶಕದ ಹಳೆಯ ಕಾಮಗಾರಿ ಬಾಕಿ ಹಣ ಚುಕ್ತಾಯ ಮಾಡದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಭವನದ ಕಂಪ್ಯೂಟರ್, ಸಿಪಿಯು ಹಾಗೂ ಜೆರಾಕ್ಸ್ ಯಂತ್ರಗಳನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಗುರುವಾರ ಜಪ್ತಿ ಮಾಡಲಾಗಿದೆ.
ಸರಕಾರಿ ಕಚೇರಿಯ ಸಾಮಗ್ರಿಗಳೇ ಜಪ್ತಿಯಾದ ಈ ಅಪರೂಪದ ಘಟನೆಗೆ ಗದಗ ಜಿಲ್ಲಾಡಳಿತ ಭವನ ಸಾಕ್ಷಿಯಾಗಿದೆ.
*ಬಾಕಿ ಬಿಲ್: ₹18 ಲಕ್ಷದಿಂದ ₹60 ಲಕ್ಷಕ್ಕೆ ಏರಿಕೆ!*
ನಗರೋತ್ಥಾನ ಯೋಜನೆ (2012-13)ರ ಅಡಿಯಲ್ಲಿ ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ್ ಅವರು ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ, ಅವರಿಗೆ ಪಾವತಿಸಬೇಕಿದ್ದ ₹18 ಲಕ್ಷ ಬಿಲ್ ಮೊತ್ತವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿರಲಿಲ್ಲ. ಬಿಲ್ ಪಾವತಿಗಾಗಿ ಗುತ್ತಿಗೆದಾರರು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ಕೊನೆಗೆ ನ್ಯಾಯದ ಬಾಗಿಲು ತಟ್ಟಿದ ಗುತ್ತಿಗೆದಾರರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿತ್ತು.
ಸುದೀರ್ಘ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಬಡ್ಡಿ ಸಮೇತ ಹಣ ಪಾವತಿಸಲು ಆದೇಶಿಸಿತ್ತು. ಪ್ರಸ್ತುತ ಈ ಮೊತ್ತ ಬಡ್ಡಿ ಸೇರಿ ಬರೋಬ್ಬರಿ ₹60 ಲಕ್ಷಕ್ಕೆ ಏರಿಕೆಯಾಗಿದೆ. ಆದಾಗ್ಯೂ ಹಣ ಪಾವತಿಸದಿದ್ದಾಗ ನ್ಯಾಯಾಲಯವು ಕಚೇರಿಯ ಉಪಕರಣಗಳನ್ನು ಜಪ್ತಿ ಮಾಡಲು ಕಠಿಣ ಆದೇಶ ಹೊರಡಿಸಿತು.
ಜಿಲ್ಲಾಡಳಿತ ಭವನದಲ್ಲಿ ಧಢೀರ್ ಸೀಜ್ ಕಾರ್ಯಾಚರಣೆ
ನ್ಯಾಯಾಲಯದ ಜಪ್ತಿ ವಾರಂಟ್ ಹಿಡಿದು ಗುರುವಾರ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಅಮೀನರು ಹಾಗೂ ಸಿಬ್ಬಂದಿ, ಕಚೇರಿಯಲ್ಲಿದ್ದ ಗಣಕಯಂತ್ರ ಹಾಗೂ ಪ್ರಿಂಟಿಂಗ್ ಉಪಕರಣಗಳನ್ನು ವಶಕ್ಕೆ ಪಡೆದರು.
ಇದ್ದಕ್ಕಿದ್ದಂತೆ ನಡೆದ ಈ ಕಾರ್ಯಾಚರಣೆಯಿಂದ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಕಾಲ ತಬ್ಬಿಬ್ಬಾದರು.
> ಜಪ್ತಿಯಾದ ಒಟ್ಟು ಸಾಮಗ್ರಿಗಳು:
* ಮಾನಿಟರ್‌ಗಳು: 19
* ಸಿ.ಪಿ.ಯು (CPU): 15
* ಜೆರಾಕ್ಸ್ ಯಂತ್ರ: 01
> (ಒಟ್ಟು 35 ಉಪಕರಣಗಳು ವಶ)
ವಕೀಲರ ಸಮ್ಮುಖದಲ್ಲಿ ಜಪ್ತಿ ಪ್ರಕ್ರಿಯೆ
ಪ್ರಕರಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಹಾಗೂ ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿಯನ್ನು ತೋರಿಸಿ ಜಪ್ತಿ ಪ್ರಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಗುತ್ತಿಗೆದಾರರ ಪರ ವಕೀಲರಾದ ಎಸ್.ಎಸ್. ಘಟ್ಟಿರಡ್ಡಿಹಾಳ ಅವರು ಉಪಸ್ಥಿತರಿದ್ದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈಗ ಸರಕಾರಿ ಕಚೇರಿಯ ಕಂಪ್ಯೂಟರ್‌ಗಳೇ ಜಪ್ತಿಯಾಗಿದ್ದು, ಜಿಲ್ಲಾಡಳಿತದ ದೈನಂದಿನ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುವಂತಾಗಿದೆ.
إرسال تعليق