⚡ಟ್ರೆಂಡಿಂಗ್ಸ್

ಹೊನ್ನಾಪೂರ ಗ್ರಾಮದಲ್ಲಿ ನರೇಗಾ ಕಾಮಗಾರಿಗೆ ಇಒ ಚಂದ್ರಶೇಖರ ಬಿ ಕಂದಕೂರ ಭೇಟಿ

*ಹೊನ್ನಾಪೂರ ಗ್ರಾಮದಲ್ಲಿ ನರೇಗಾ ಕಾಮಗಾರಿಗೆ ಇಒ ಚಂದ್ರಶೇಖರ ಬಿ ಕಂದಕೂರ ಭೇಟಿ*
 
 *ಗುಣಮಟ್ಟದ ಕೆಲಸ ಮಾಡಿದರೆ ನಿರಂತರ ಉದ್ಯೋಗ*

 *ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುಂಜಾನೆ ಬೇಗ ಬಂದು ಬೇಗ ಕೆಲಸ ಮುಗಿಸಿ* 


 *ರೋಣ* :- ತಾಲೂಕಿನ ಸವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಾಪೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಗೆ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಾಮಗಾರಿ ಸ್ಥಳದಲ್ಲಿ ಕೆಲಸದ ಪ್ರಗತಿ, ಗುಣಮಟ್ಟ ಹಾಗೂ ಕೂಲಿಕಾರರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ಅವರು, ಸರ್ಕಾರದ ಮಾರ್ಗಸೂಚಿ ಅನುಸಾರ ಕೂಲಿಕಾರರು ಕಡ್ಡಾಯವಾಗಿ ಅಳತೆಗೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. 

ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಮುಂಜಾನೆ ಬೇಗ ಕೆಲಸಕ್ಕೆ ಹಾಜರಾಗಿ ಮಧ್ಯಾಹ್ನದೊಳಗೆ ಕೆಲಸ ಮುಗಿಸಿಕೊಳ್ಳುವಂತೆ ಸಲಹೆ ನೀಡಿದರು.ಈ ವೇಳೆ ಕೂಲಿಕಾರರು ಗ್ರಾಮದಲ್ಲಿ ನಿರಂತರವಾಗಿ ನರೇಗಾ ಕಾಮಗಾರಿಗಳನ್ನು ಆರಂಭಿಸಿ ಉದ್ಯೋಗಾವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯ ನಿರ್ವಾಹಕ ಅಧಿಕಾರಿಗಳು, ಗುಣಮಟ್ಟದ ಹಾಗೂ ನಿಯಮಾನುಸಾರ ಕೆಲಸ ಮಾಡಿದಲ್ಲಿ ನಿರಂತರವಾಗಿ ಕೆಲಸ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಕೂಲಿಕಾರರು ಹಾಗೂ ಸಿಬ್ಬಂದಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಯಿತು. ಪ್ರತಿದಿನ ಕಡ್ಡಾಯವಾಗಿ ಎರಡು ಬಾರಿ ಎನ್‌ಎಂಎಂಎಸ್ (NMMS) ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು ಎಂದು ತಿಳಿಸಲಾಯಿತು. ಕಾಯಕ ಬಂಧುಗಳು ತಮ್ಮ ವ್ಯಾಪ್ತಿಯ ಕೂಲಿಕಾರರಿಗೆ ಪ್ರತಿದಿನ ಕೆಲಸದ ಅಳತೆಯ ಕುರಿತು ಮಾಹಿತಿ ನೀಡಿ, ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಯಿತು.
 
ಎನ್‌ಎಂಆರ್ ತೆಗೆದುಕೊಂಡ ಕೂಲಿಕಾರರು ಕಡ್ಡಾಯವಾಗಿ ಕಾಮಗಾರಿ ಸ್ಥಳಕ್ಕೆ ಹಾಜರಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಬದು ನಿರ್ಮಾಣ ಕಾಮಗಾರಿಗಳು ಗ್ರಾಮೀಣ ಭಾಗದಲ್ಲಿ ನೀರು ಸಂರಕ್ಷಣೆ, ಮಣ್ಣಿನ ಸದ್ಬಳಕೆ ಹಾಗೂ ರೈತರ ಭೂಮಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತಿದ್ದು, ಗ್ರಾಮಾಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ, ಟಿಐಇಸಿ, ಡಿಇಓ, ಜಿಕೆಎಂ , ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

أحدث أقدم
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...