*ಸಂಕಷ್ಟ ಹರ - ಭಕ್ತವತ್ಸಲ -ವರಪ್ರದ ಶ್ರೀ ಕೈಲಾಸ ವರಸಿದ್ಧಿ ಗಣಪತಿ..*
(ಇಂದು 39ನೇ ವಾರ್ಷಿಕೋತ್ಸವ ನಿಮಿತ್ಯ ಲೇಖನ)
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ
ಬಂದ ವಿಘ್ನಗಳ ಕಳೆ ಗಣನಾಥ ಎಂಬ ಪುರಂದರದಾಸರ ಗಣಪತಿ ಶ್ಲೋಕದಂತೆ ಗದುಗಿನ ಮಸಾರಿ ಭಾಗದ 12ನೇ ವಾರ್ಡಿನಲ್ಲಿ ನೆಲೆಸಿರುವ ಶ್ರೀ ಕೈಲಾಸ `ವರಸಿದ್ಧಿ ಗಣಪತಿಯು ನಂಜಿನಗುಡ್ಡದ ಉಚ್ಚಷ್ಣ ಗಣಪತಿಯಂತೆ ಕನ್ನಡ ನಾಡಿನ ಭಕ್ತವತ್ಸಲ, ಸಂಕಷ್ಟ ಹರ ಗಣಪತಿಯಾಗಿ ಭಕ್ತರಲ್ಲಿ ಕಾಣಿಸಿಕೊಂಡಿದ್ದು ಈ ಭಾಗದ ಭಕ್ತರ ಪಾಲಿಗೆ ವರಪ್ರದವಾಗಿದೆ.
ಬೇಡಿ ಬರುವ ಭಕ್ತರ ಪಾಲಿಗೆ ವರಸಿದ್ದಿಯಾಗಿರುವ ಶ್ರೀ ಕೈಲಾಸ ವರಸಿದ್ಧಿ ಗಣಪತಿಯು ನಂಬಿದ ಭಕ್ತರ ಮನೋಕಾಮನೆಗಳನ್ನು ಸಿದ್ದಿಸದೆ ಬಿಡಲಾರ. ಪರಿಪೂರ್ಣವಾಗಿ ಶರಣಾದ ಭಕ್ತರ ಸಂಕಷ್ಟಗಳಿಗೆ ಸ್ಪಂಧಿಸುತ್ತಿರುವ ಶ್ರೀ ಕೈಲಾಸ ವರಸಿದ್ದಿ ಗಣಪತಿಯ ಪವಾಡಗಳಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ, ಅಂತರ್ ರಾಜ್ಯಗಳಿಂದ ಈ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರು ಅತ್ಯಂತ ಭಕ್ತಿಯಿಂದ ಗಣಪತಿಗೆ ಶರಣಾಗುತ್ತಿರುವುದನ್ನು ಕಂಡಾಗ ಶ್ರೀ ಕೈಲಾಸ ವರಸಿದ್ದಿ ಗಣಪತಿಯ ಶಕ್ತಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಈಗಿರುವ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಬಿ.ಶ್ರೀರಾಮುಲು, ಕಾನೂನು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವರಾದ ಎಚ್ಚೆ ಪಾಟೀಲರು ಸೇರಿದಂತೆ ರಾಜ್ಯ-ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಗಮಿಸಿ ಶ್ರೀ ಕೈಲಾಸ ವರಸಿದ್ದಿ ಗಣಪತಿಯ ದರ್ಶನ ಪಡೆದಿದ್ದು, ಪಡೆಯುತ್ತಿರುವುದು ಇನ್ನಷ್ಟು ಮತ್ತಷ್ಟು ಭಕ್ತಿಯ ಸೆಲೆಯ ಶಕ್ತಿಯ ಗರಿಷ್ಠತೆಗೆ ಕಾರಣವಾಗಿದೆ.
ಉತ್ತರ ಕರ್ನಾಟಕದಲ್ಲಿಯೇ ಅತೀ ಎತ್ತರದ ಕಪ್ಪು ಶಿಲ್ಪಕಲೆಯ ಕುಳಿತ
ಬಲಮುರಿ ವರದಾಯಕ ಗಣಪತಿ ಮೂರ್ತಿ ಎಂಬುದು ವಿಶೇಷತೆಯಲ್ಲಿ ಒಂದಾಗಿದೆ. ಈ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು ತಪೋನಿಷ್ಠರು, ಮಹಾಸಂಸ್ಥಾನ ಪೀಠಾಧೀಶರು, ಅನುಷ್ಠಾನಪರರು ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ 1987 ಎಪ್ರೀಲ 15-16-17ರಂದು ನೆರವೇರಿದ್ದು ಈ ಭಾಗದ ಧಾರ್ಮಿಕ ಇತಿಹಾಸ ಪುಟದಲ್ಲಿ ವಜ್ರಾಕ್ಷರಗಳಿಂದ ಬರೆಯುವಂತಾಗಿದೆ.
ಈ ದೇವಸ್ಥಾನದ ನಿರ್ಮಾಣ ಮತ್ತು ದೇವಸ್ಥಾನಕ್ಕೆ ಆಗಿರುವ ನಾಮಕರಣ, ದೇವರ ಮೂರ್ತಿ ರಚನೆಯು ಆಶ್ವರತೆಯಿಂದ ಕೂಡಿದೆ. 1984ರ ಸಂದರ್ಭದಲ್ಲಿ ಗದಗ ನಗರದಲ್ಲಿ ಗಣಪತಿಗಾಗಿ ಪ್ರತ್ಯೇಕ ದೇವಸ್ಥಾನ ಇರಲಿಲ್ಲ ಈ ನೋವು ಗದಗ ಜನತೆಯನ್ನು ಕಾಡುತ್ತಿತ್ತು, ಈ ಕೊರಗನ್ನು ಅರ್ಥ ಮಾಡಿಕೊಂಡ ಗದಗ ನಗರದ ಮಸಾರಿ ಭಾಗದ ಹೋಟೆಲ್ ಉದ್ಯಮಿ ಬಿ.ಮಹಾಬಲರಾವ್ ಗದಗ ನಗರದ ಮಸಾರಿ ಭಾಗದಲ್ಲಿ ಪ್ರತ್ಯೇಕವಾದ ಗಣಪತಿ ದೇವಸ್ಥಾನ ನಿರ್ಮಿಸಲು ತೊಟ್ಟ ಸಂಕಲ್ಪವೇ ಇಂದು ಕನ್ನಡ ನಾಡಿನ ಭಕ್ತರಲ್ಲಿ ಭಕ್ತವತ್ಸಲ ಗಣಪತಿಯಾಗಿ ಕಾಣಿಸಿಕೊಂಡಿರುವ ಗದಗನಗರದ 12ನೇ ವಾರ್ಡಿನ ಮಸಾರಿ ಭಾಗದ ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ.
ಬಿ.ಮಹಾಬಲರಾವ್ ಗಣಪತಿ ದೇವಸ್ಥಾನದ ನಿರ್ಮಾಣಕ್ಕೆ ಸ್ಫೂರ್ತಿಯಾಗಿ ನಿಂತವರು. ಹೋಟೇಲ್ ಉದ್ಯಮಿ ಆರ್.ಪಿ.ಕಾಮತ್ ಹಾಗೂ ಮಾಜಿ ಶಾಸಕ ಡಿ.ಆರ್.ಪಾಟೀಲರ ಜೊತೆಗೆ ಹೋಟೇಲ್ ಉದ್ಯಮಿಗಳ ಸಂಘ ಮತ್ತು ಗಣ್ಯರ ಸಹಕಾರದಲ್ಲಿ ಈ ದೇವಸ್ಥಾನದ ನಿರ್ಮಾಣವಾಯಿತಲ್ಲದೆ ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳು ಈ ದೇವಸ್ಥಾನಕ್ಕೆ ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನವೆಂದು ನಾಮಕರಣ ಮಾಡುವ ಜೊತೆಗೆ ಗಣಪತಿ ಮೂರ್ತಿ, ಪೀಠವನ್ನು ತಮ್ಮ ಮಹಾ ಸಂಸ್ಥಾನದಿಂದ ನಿರ್ಮಿಸಿಕೊಟ್ಟಿದ್ದು ಭಕ್ತರ ಪುಣ್ಯವೆಂತಲೇ ಹೇಳಬಹುದು.
ಈ ದೇವಸ್ಥಾನದ ನಿರ್ಮಾಣಕ್ಕೆ ಗಣ್ಯಮಾನ್ಯರು, ಸಾಮಾಜಿಕ, ಧಾರ್ಮಿಕ ಹಿತ ಚಿಂತಕರು, ಗಣಪತಿಯ ಸದ್ಭಕ್ತರು ಸೇರಿದಂತೆ ಬಹುತೇಕ ಎಲ್ಲ ವರ್ಗದ ಸದ್ಭಕ್ತರು ಎಲ್ಲ ರೀತಿಯ ನೆರವು ನೀಡಿದ್ದರಿಂದ ವರಪ್ರದಾಯಕ ಗಣನಾಯಕನಾಗಿ ಕಂಗೋಳಿಸುತ್ತಿದ್ದಾನೆ.
1987 ರಿಂದ ಶ್ರೀ ಕೈಲಾಸ ವರಸಿದ್ಧಿ ಗಣಪತಿಯು ನೆಲೆ ನಿಂತು ಭಕ್ತರ ಭವಣೆಗೆ ಸ್ಪಂಧಿಸಿ ವರಸಿದ್ದಿದಾತನಾಗಿ, ಭಕ್ತರ ಸಕಲ ಇಷ್ಟಾರ್ಥಗಳ ಕಾಮದೇನು-ಕಲ್ಪವೃಕ್ಷವಾಗಿ, ವಿಘ್ನಗಳ ನಿವಾರಕ ಸೆಲೆಯಾಗಿ ಕುಳಿತಿದ್ದು ನಮ್ಮೇಲ್ಲರ ಸೌಭಾಗ್ಯದ ಸ್ವರ್ಗವೇ ಎನ್ನುವಂತಾಗಿದೆ.
ದೇವಸ್ಥಾನಕ್ಕೆ ಯಾವುದೇ ವರಮಾನ, ಆಸ್ತಿ ಇಲ್ಲದಿದ್ದರೂ ಈ ಕೊರತೆಯನ್ನು ದೇವಸ್ಥಾನದ ಸದ್ಭಕ್ತರು ಈಡೇರಿಸಿದ್ದು ವಿಶೇಷ. ದೇವಸ್ಥಾನದ ಅಭಿವೃದ್ಧಿಪರ ಯೋಜನೆಗಳಿಗೆ, ಭಕ್ತರಿಗೆ ಅಗತ್ಯ ವ್ಯವಸ್ಥೆ ಮತ್ತು
ಸಾರ್ವತ್ರಿಕ ಸೌಲಭ್ಯಗಳಿಗೆ ತನು-ಮನ-ಧನ'ದಿಂದ ಸಹಾಯಕರಾಗಿ ನಿಂತ ಎಲ್ಲ ಸದ್ಭಕ್ತರ ಸೇವೆ ಅವಿಸ್ಮರಣೀಯ ಮತ್ತು ಅನುಕರಣಿಯ.
ಕನ್ನಡನಾಡಿನ ಸಕಲ ಸದ್ಭಕ್ತರಲ್ಲಿ ನೆಲೆ ನಿಂತಿರುವ ಶ್ರೀ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ *ದಿನಾಂಕ 05-04-2026 ರವಿವಾರದಂದು 39ನೇ ವಾರ್ಷಿಕೋತ್ಸವ ನಡೆಯಲಿದ್ದು* ಇದರ ಅಂಗವಾಗಿ ವಿಶೇಷ ಗಣಹೋಮ- ಧಾರ್ಮಿಕ ವಿವಿಧ ಪೂಜೆಗಳೊಂದಿಗೆ ಅರ್ಥಪೂರ್ಣವಾಗಿ ಪೂಜಾ ಕಂಕೈರ್ಯಗಳನ್ನು, ಸಾರ್ವತ್ರಿಕ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದೆ.
ಶ್ರೀ ಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನವು ನಾಡಿನ ಖ್ಯಾತ ದೇವಸ್ಥಾನಗಳ ಪಟ್ಟಿಯಲ್ಲಿ ಸೇರುವಂತೆ ಶ್ರಮಿಸುತ್ತಿರುವ ದೇವಸ್ಥಾನದ ಟ್ರಸ್ಟ ಅಧ್ಯಕ್ಷ ಬಿ. ಪ್ರಸನ್ನಕುಮಾರ, ಕಾರ್ಯದರ್ಶಿ ಯೋಗೇಶ ವೋರಾ, ಖಜಾಂಚಿ ಪ್ರದೀಪಕುಮಾರ, ಟ್ರಸ್ಟಿಗಳಾದ ಮುಕುಂದ ಪೋತ್ನಿಸ್, ರಾಘವೇಂದ್ರ ಕುಂದಾಪೂರ, ಪ್ರಧಾನ ಅರ್ಚಕರಾದ ವೇ.ಮೂ.ಕೆ.ವಿ.ಭಟ್ ಅವರುಗಳನ್ನು ಅಭಿನಂದಿಸಲೇಬೇಕು.
ಶ್ರೀ ಕೈಲಾಸ ವರಸಿದ್ದಿ ಗಣಪತಿ ದೇವಸ್ಥಾನದ ಜೊತೆಗೆ ಸಕಲ ಸದ್ಭಕ್ತರು ಹೊಂದಿರುವ ಧಾರ್ಮಿಕ ಸಂಬಂಧಗಳು ಇನ್ನಷ್ಟು ಮತ್ತಷ್ಟು ಹೆಚ್ಚಾಗಿ ದೇವಸ್ಥಾನದ ಜೊತೆಗೆ ಸದ್ಭಕ್ತರು ಇನ್ನಷ್ಟು ಕೈಜೋಡಿಸಿ ಬರುವ 40ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಡೆಯುವ 5 ದಿನದ ಕಾರ್ಯಕ್ರಮಗಳನ್ನು 'ನ ಬೂತೋ ನ ಭವಿಷ್ಯ' ಎಂಬಂತೆ ನಿರ್ವಹಿಸಲು ಸದ್ಭಕ್ತರು ಸಾಕ್ಷಿಕರೀಸಬೇಕೆಂಬುದೆ ನಮ್ಮೇಲ್ಲರ ಆಶಯ..
*ಡಾ.ಅನಂತ.ಎಸ್. ಕಾರ್ಕಳ ಗದಗ..*
إرسال تعليق