ಕಲಬುರಗಿ ವಿಭಾಗದ ಕಾರ್ಯಾಧ್ಯಕ್ಷರಾಗಿ ಯಮನೂರಪ್ಪ ವಠಾರದ ನೇಮಕ
ಸಿಂಧನೂರು, ಏ.28: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ), ಬೆಂಗಳೂರು ಇದರ ಕಲಬುರಗಿ ವಿಭಾಗದ ಕಾರ್ಯಾಧ್ಯಕ್ಷರಾಗಿ ಯಮನೂರಪ್ಪ ದ್ಯಾಮಣ್ಣ ವಠಾರದ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ಅವರು ಸಿಂಧನೂರು ತಾಲೂಕಿನ ಶ್ರೀನಿವಾಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಚುರುಕಾಗಿ ತೊಡಗಿಸಿಕೊಂಡಿರುವ ಅವರು ವಿವಿಧ ಸಮಾರಂಭಗಳು, ಸಭೆಗಳು, ಕಾರ್ಯಾಗಾರಗಳು, ಕವಿಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಯಮನೂರಪ್ಪ ವಠಾರದ ಅವರು ಕಲ್ಯಾಣ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ಹಲವು ಸಂಘಟನೆಗಳಲ್ಲಿ ಶೈಕ್ಷಣಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ, ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸಹ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದವರಾದ ಅವರು ಬಾಲ್ಯದಿಂದಲೇ ಕಲಾ ಆಸಕ್ತರಾಗಿದ್ದು, ಸಾಮಾಜಿಕ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಕಲಾವಿದರಾಗಿ ಹೆಸರು ಮಾಡಿದ್ದರು. ವಿದ್ಯಾರ್ಥಿ ಜೀವನದಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ತಾಲೂಕು ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅನೇಕ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ತಯಾರಿಸಿದ ಸಾಧನೆಯೂ ಇವರದ್ದಾಗಿದೆ.
ಗ್ರಾಮೀಣ ಭಾಗದ ಯುವಕರಿಗೆ ಪ್ರೇರಣೆಯಾಗಿರುವ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಅಕಾಡೆಮಿಗಳಲ್ಲಿ ಬೋಧನೆ ಮಾಡಿದ ಅನುಭವ ಹೊಂದಿದ್ದಾರೆ. ಕೃಷಿಕ ಕುಟುಂಬದಿಂದ ಬಂದಿರುವ ಅವರು ಕೃಷಿಯೊಂದಿಗೆ ಸಾಹಿತ್ಯ ಸೇವೆಯನ್ನೂ ಸಮನ್ವಯಗೊಳಿಸಿಕೊಂಡಿದ್ದಾರೆ.
ಸರ್ಕಾರಿ ನೌಕರರಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವುದು ಪರಿಷತ್ತಿನ ಪ್ರಮುಖ ಉದ್ದೇಶವಾಗಿದ್ದು, ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಸರ್ಕಾರಿ ನೌಕರರ ಪ್ರತಿಭೆಯನ್ನು ರಾಜ್ಯದ ಮಟ್ಟಿಗೆ ಪರಿಚಯಿಸುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಯಮನೂರಪ್ಪ ವಠಾರದ ತಿಳಿಸಿದ್ದಾರೆ.
ಪರಿಷತ್ತಿನ ಮೊದಲ ರಾಜ್ಯಮಟ್ಟದ ಭವ್ಯ ಪದಗ್ರಹಣ ಸಮಾರಂಭವು ಏಪ್ರಿಲ್ 26ರಂದು ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪದಗ್ರಹಣ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯಾಧ್ಯಕ್ಷೆ ಶ್ರೀಮತಿ ರಮಾ ಆರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪರ್ವೀನ್ ಬಾನು ಬುಳ್ಳಣ್ಣ ಈ ವಿಷಯ ತಿಳಿಸಿದ್ದಾರೆ.
إرسال تعليق